ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಸಭೆಗಳು, ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳಲ್ಲಿ ಇನ್ನು ಮುಂದೆ ಆರೋಗ್ಯಕರ ಆಹಾರ ಪದ್ಧತಿಯನ್ನು ಕಡ್ಡಾಯಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಏಪ್ರಿಲ್ 13, 2026 ರಂದು ಅಧಿಕೃತ ‘ಪೌಷ್ಟಿಕತೆಯ ಸಲಹೆ’ಯನ್ನು (Nutrition Advisory) ಹೊರಡಿಸಿದೆ.
ಯಾವುದಕ್ಕೆ ಆದ್ಯತೆ? ಸರ್ಕಾರಿ ಕಚೇರಿಗಳ ಒಳಾಂಗಣ ಸಭೆ ಮತ್ತು ವಿರಾಮದ ವೇಳೆಯಲ್ಲಿ ಈ ಕೆಳಗಿನ ಆಹಾರಗಳನ್ನು ನೀಡಲು ಶಿಫಾರಸ್ಸು ಮಾಡಲಾಗಿದೆ:
-
ಸಿರಿಧಾನ್ಯ ಆಧಾರಿತ ಲಘು ಉಪಹಾರ: ರಾಗಿ, ನವಣೆಯಂತಹ ಸಿರಿಧಾನ್ಯಗಳ ಬಳಕೆ.
-
ಪೌಷ್ಟಿಕಾಂಶಯುಕ್ತ ತಿನಿಸು: ತಾಜಾ ಕತ್ತರಿಸಿದ ಹಣ್ಣುಗಳು, ತರಕಾರಿ ಸಲಾಡ್, ಮೊಳಕೆ ಬರಿಸಿದ ಕಾಳುಗಳು ಮತ್ತು ಬೇಯಿಸಿದ ಹುರಳಿಕಾಳು ಅಥವಾ ಮೆಕ್ಕೆಜೋಳ.
-
ಬೀಜಧಾನ್ಯಗಳು: ಉಪ್ಪು ರಹಿತವಾಗಿ ಹುರಿದ ಬಾದಾಮಿ, ನೆಲಗಡಲೆ, ಆಕ್ರೋಡ್ ಮತ್ತು ಕುಂಬಳಕಾಯಿ ಅಥವಾ ಸೂರ್ಯಕಾಂತಿ ಬೀಜಗಳು.
-
ಆರೋಗ್ಯಕರ ಪಾನೀಯ: ಗ್ರೀನ್ ಟೀ, ಕಡಿಮೆ ಕೊಬ್ಬಿನ ಮಜ್ಜಿಗೆ ಮತ್ತು ಗಾಜಿನ ಬಾಟಲಿ ಅಥವಾ ಸ್ಟೀಲ್ ಫ್ಲಾಸ್ಕ್‌ಗಳಲ್ಲಿ ಕುದಿಸಿ ಆರಿಸಿದ ನೀರು.
ದೂರವಿರಬೇಕಾದ ಆಹಾರಗಳು: ಆರೋಗ್ಯದ ದೃಷ್ಟಿಯಿಂದ ಕೆಲವು ಆಹಾರ ಮತ್ತು ಪಾನೀಯಗಳನ್ನು ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ:
-
ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿದ ಅಥವಾ ತಯಾರಿಸಿದ ಆಹಾರ.
-
ಕೈಗಾರಿಕಾ ಸಂಸ್ಕರಿತ ಆಹಾರ, ಎಣ್ಣೆಯಲ್ಲಿ ಕರಿದ ತಿಂಡಿಗಳು ಮತ್ತು ಅಜಿನೊಮೊಟೊ (MSG) ಒಳಗೊಂಡ ಪದಾರ್ಥಗಳು.
-
ಕಾರ್ಬೋನೇಟೆಡ್ ಶೀತಲ ಪಾನೀಯಗಳು, ಅತಿಯಾದ ಸಕ್ಕರೆ ಇರುವ ಹಣ್ಣಿನ ರಸ ಮತ್ತು ಹಾಲು ಸೇರಿಸಿದ ಕಾಫಿ ಅಥವಾ ಟೀ.
-
ಪ್ಲಾಸ್ಟಿಕ್ ಬಾಟಲಿಯ ನೀರು ಮತ್ತು ಮದ್ಯಸಾರ ಆಧಾರಿತ ಪಾನೀಯಗಳು.
ವಿಶೇಷ ಸೂಚನೆಗಳು: ಊಟದ ವ್ಯವಸ್ಥೆ ಇರುವ ಕಾರ್ಯಕ್ರಮಗಳಲ್ಲಿ ಕನಿಷ್ಠ ಎರಡು ಸಿರಿಧಾನ್ಯದ ಪದಾರ್ಥಗಳು ಇರಬೇಕು ಹಾಗೂ ಬಿಳಿ ಅಕ್ಕಿಯ ಬದಲಿಗೆ ‘ಬ್ರೌನ್ ರೈಸ್’ ಬಳಸಲು ಸೂಚಿಸಲಾಗಿದೆ. ಅಲ್ಲದೆ, ಸ್ಥಳೀಯ ಪಾಕ ಪದ್ಧತಿ ಮತ್ತು ಸ್ಥಳೀಯ ಸಣ್ಣ ಕೈಗಾರಿಕೆಗಳು ಅಥವಾ ಸ್ವಸಹಾಯ ಸಂಘಗಳು ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಬೇಕು. ಆಹಾರವನ್ನು ಕೇವಲ ಮರುಬಳಕೆ ಮಾಡಬಹುದಾದ ಲೋಹದ ತಟ್ಟೆ ಮತ್ತು ಲೋಟಗಳಲ್ಲಿಯೇ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ವ್ಯಾಖ್ಯಾನದಂತೆ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇಲಾಖೆಯ ಮುಖ್ಯಸ್ಥರು ಇದನ್ನು ಕಡ್ಡಾಯವಾಗಿ ಜಾರಿಗೆ ತರಲು ಪ್ರಯತ್ನಿಸಬೇಕೆಂದು ಆಯುಕ್ತರು ಸೂಚಿಸಿದ್ದಾರೆ.









