ಬೆಂಗಳೂರು: ಸಾಮಾಜಿಕ ಜಾಲತಾಣಗಳು ಸಕ್ರೀಯವಾಗಿರುವ ಪ್ರಸ್ತುತ ದಿನಗಳಲ್ಲಿ, ವಿಶ್ವಾಸಾರ್ಹಕ್ಕೆ ಪಾತ್ರವಾಗಿರುವ ಪತ್ರಿಕೋದ್ಯಮವು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ) ವತಿಯಿಂದ ಪತ್ರಿಕೋದ್ಯಮ ಸೇವೆಗಾಗಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಿರಿಮೆಗೆ ಪಾತ್ರರಾದ ’ಪ್ರಜಾಪ್ರಗತಿ’ ದಿನಪತ್ರಿಕೆಯ ಸಂಪಾದಕ ಎಸ್.ನಾಗಣ್ಣ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪತ್ರಿಕೋದ್ಯಮದಿಂದ ಸಮಾಜ ಬದಲಾವಣೆ ಸಾಧ್ಯವಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾಯಕವನ್ನು ಪತ್ರಿಕೆಗಳು ಉತ್ತಮ ಸೇವೆ ಸಲ್ಲಿಸಿಕೊಂಡು ಬಂದಿವೆ. ಮುದ್ರಣ ಮಾಧ್ಯಮಕ್ಕೀಗ ಭಾರೀ ಸವಾಲಿನ ದಿನಗಳು ಎದುರಾಗಿವೆ ಎಂದರು.
ಹಿರಿಯ ಪತ್ರಕರ್ತ ಎಸ್.ನಾಗಣ್ಣ ಅವರಿಗೆ ಸಂದಿರುವ ಈ ಗೌರವವು ಕನ್ನಡ ಪತ್ರಿಕೋದ್ಯಮಕ್ಕೆ ಸಂದ ಹಿರಿಮೆ ಎಂದೂ ಅವರು ವಿಶ್ಲೇಷಿಸಿದರು.
ನಾಗಣ್ಣ ಸೇವೆ ಅನನ್ಯ: ಮದನಗೌಡ
ಅಭಿನಂದನಾ ಮಾತುಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಎಚ್.ಬಿ. ಮದನಗೌಡ ಮಾತನಾಡಿ, ಪತ್ರಿಕೋದ್ಯಮವು ಇಂದು ಸಮಾಜ ಸೇವಾ ಮನೋಭಾವದಿಂದ ದೂರ ಸರಿದು, ಉದ್ಯಮವಾಗಿ ಬದಲಾಗುತ್ತಿದೆ. ನಾಗಣ್ಣ ಅವರು ಪ್ರಜಾಪ್ರಗತಿ ಪತ್ರಿಕೆಯ ಮೂಲಕ ತುಮಕೂರಿಗೂ ಒಂದೊಳ್ಳೆಯ ಹೆಸರನ್ನು ದೊರಕಿಸಿಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದು ಅವರ ಹೋರಾಟದ ಸೇವೆಯನ್ನು ಸ್ಮರಿಸಿದರು.
ಪರಿಶ್ರಮದ ಸಂಘಜೀವಿ:
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ಅವರು ನಾಗಣ್ಣ ಅವರ ಬದುಕಿನ ಪ್ರೇರಣೆ. ಜಿಲ್ಲಾ ಮಟ್ಟದ ಪತ್ರಿಕೆ ಸಂಪಾದಕರಾಗಿ ತನ್ನ ಪರಿಶ್ರಮ ಮತ್ತು ಬದ್ಧತೆಯಿಂದ ಅದೇ ಪತ್ರಿಕೆಯನ್ನು ರಾಜ್ಯ ಮಟ್ಟದ ಪತ್ರಿಕೆಯನ್ನಾಗಿ ರೂಪಿಸಿ ಅದಕ್ಕೆ ಸಂಪಾದಕರಾಗಿದ್ದಾರೆ. ರಾಜ್ಯ ಸಮ್ಮೇಳನ ಸಂದರ್ಭದಲ್ಲಿ ಅವರ ಸೇವೆ ಶ್ಲಾಘನೀಯ ಎಂದರು.
ನಾಗಣ್ಣ ಸೇವೆ ಸ್ಮರಣೆ:
ಐಎ್ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಶ್ರಮದಿಂದ ಪತ್ರಿಕೋದ್ಯಮ ಮಾಡಿಕೊಂಡು ಬಂದ ನಾಗಣ್ಣ, ಸಂಘದ ಜೊತೆಗೂ ಅವಿನಾಭಾವ ಸಂಬಂದ ಹೊಂದಿದ್ದಾರೆ ಎಂದರು. ಹಿರಿಯ ಪತ್ರಕರ್ತ ಎಸ್.ಕೆ.ಶೇಷಚಂದ್ರಿಕಾ ಅವರು ಮಾತನಾಡಿ, ಸುಖದ ಕಾಲದಲ್ಲಿ ನಾಗಣ್ಣ ಪತ್ರಿಕೋದ್ಯಮ ಮಾಡಿದ್ದಕ್ಕಿಂತ ಹೆಚ್ಚು ಸವಾಲಿನ ವಿರುದ್ದ ಈಜಿದ್ದು ಹೆಚ್ಚು. ಗ್ರಾಮೀಣ ಪತ್ರಿಕೋದ್ಯಮಕ್ಕೆ ಶಕ್ತಿ ನೀಡುವ ಕೆಲಸವನ್ನು ಅವರು ಸತತವಾಗಿ, ಪರಿಶ್ರಮದಿಂದ ಮಾಡಿಕೊಂಡು ಬಂದಿದ್ದಾರೆ ಎಂದರು.
ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ.ಶಂಭುಲಿಂಗ ನಾಗಣ್ಣ ಅವರ ಪತ್ರಿಕೋದ್ಯಮದ ಸೇವೆ ಮತ್ತು ಅವರ ಕಾರ್ಯಕ್ಷಮತೆಯನ್ನು ಕೊಂಡಾಡಿದರು.
ಮರೆಯಲಾಗದ ದಿನ:
ಕೆಯುಡಬ್ಲೂಜೆ ಗೌರವ ಸ್ವೀಕರಿಸಿ ಮಾತನಾಡಿದ ಎಸ್.ನಾಗಣ್ಣ ಅವರು, ನನ್ನ ಬದುಕಿನಲ್ಲಿ ಕೆಯುಡಬ್ಲೂಜೆ ಅಭಿನಂದನೆ ಕೂಡ ಮರೆಯಲಾಗದ ದಿನ. ಇಂಥದೊಂದು ಅವಕಾಶ ಕಲ್ಪಿಸಿ ಬರಮಾಡಿಕೊಂಡ ತಗಡೂರು ಮತ್ತು ಪದಾಧಿಕಾರಿಗಳಿಗೆ ಧನ್ಯವಾದಗಳು. ಶೇಷಣ್ಣ ಮತ್ತು ಮದನಗೌಡರು ಸೇರಿದಂತೆ ಹಲವರು ನನ್ನ ಬಗ್ಗೆ ಗುಣಗಾನ ಮಾಡಿದ್ದೀರಿ. ಅವರಿಗೂ ಅಭಾರಿಯಾಗಿರುವೆ. ಪತ್ರಿಕೋದ್ಯಮಕ್ಕೆ ಎಷ್ಟೇ ಪೈಪೋಟಿ ಬರಲಿ, ಅದನ್ನು ಎದುರುಸಿಕೊಂಡು, ನಮ್ಮ ವೃತ್ತಿ ಗೌರವವನ್ನು ಕಾಪಾಡಿಕೊಳ್ಳಲು ಸಂಘಟಿತ ಪ್ರಯತ್ನ ನಡೆಸೋಣ ಎಂದರು.
ಗಿರೀಶ್ ಲಿಂಗಣ್ಣಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಸಂಶೋಧನಾತ್ಮಕ ಮತ್ತು ವೈಜ್ಞಾನಿಕ ವರದಿಗಳಿಗಾಗಿ ಕೆಯೂಡಬ್ಲ್ಯೂಜೆಯಲ್ಲಿ ದತ್ತಿ ನಿಧಿ ಪ್ರಶಸ್ತಿ ಸ್ಥಾಪನೆ ಮಾಡಿರುವ ಅಂಕಣಕಾರ ಗಿರೀಶ್ ಲಿಂಗಣ್ಣ ಅವರನ್ನೂ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಎಚ್.ಎನ್.ಮಲ್ಲೇಶ್ ಅವರಿಗೆ ಪ್ರಜಾಪ್ರಗತಿ ದತ್ತಿ ನಿಧಿಯನ್ನು ಪ್ರದಾನ ಮಾಡಲಾಯಿತು.
ಹಿರಿಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಈಶ್ವರ ದೈ ತೋಟ, ಕಂ.ಕ.ಮೂರ್ತಿ, ಕೆಯೂಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿ ನಿಂಗಪ್ಪ ಚಾವಡಿ, ತುಮಕೂರು ಜಿಲ್ಲಾ ಘಟಕ ಅಧ್ಯಕ್ಷ ಚಿ.ನಿ.ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿ ರಘುರಾಮ್, ಹಲವು ಜಿಲ್ಲೆಯಿಂದ ಬಂದಿದ್ದ ಸಂಘದ ಪದಾಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು. ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್ ವಂದನಾರ್ಪಣೆ ಮಾಡಿದರು.
ನಾಗಣ್ಣ, ಲಿಂಗಣ್ಣ ಸೇರಿ ನಾಲ್ವರಿಗೆ ಕೆಯುಡಬ್ಲೂಜೆ ಸನ್ಮಾನ
ಹಿರಿಯ ಪತ್ರಕರ್ತರಾದ ಎಸ್.ನಾಗಣ್ಣ ಮತ್ತು ಅಂಕಣಗಾರ ಗಿರೀಶ್ ಲಿಂಗಣ್ಣ ಅವರು ಕೆಯುಡಬ್ಲೂೃಜೆಯಲ್ಲಿ ದತ್ತಿನಿಧಿ ಪ್ರಶಸ್ತಿ ಸ್ಥಾಪಿಸಿದ್ದಾರೆ. ಗ್ರಂಥಾಲಯ ಸ್ಥಾಪನೆಗೆ ಸಹಕಾರ ನೀಡಿರುವ ಸಿ.ಎಸ್.ಷಡಾಕ್ಷರಿ. ಕಸಾಪ ಗೌರವ ಕಾರ್ಯದರ್ಶಿಯಾಗಿರುವ ಎಚ್.ಬಿ.ಮದನಗೌಡ ಅವರನ್ನು ಕೆಯುಡಬ್ಲೂೃಜೆ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ದೂರ, ಈ ನರಸಿಂಹ ಸ್ವಾಮಿ ಶ್ಲೋಕ ಒಮ್ಮೆ ಪಠಿಸಿ ನೋಡಿ
BREAKING: ಗ್ರಾಮ ಪಂಚಾಯ್ತಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿಲ್ಲ: ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ