ಬೆಂಗಳೂರು : ವಸ್ತುಗಳನ್ನು ಅಂಗಡಿಗಳಲ್ಲಿ ಖರೀದಿಸುವಾಗಾಗ ಅವುಗಳ ಗುಣಮಟ್ಟ, ತೂಕ ಮೊದಲಾವುಗಳನ್ನು ಸಮಗ್ರವಾಗಿ ಪರಿಶೀಲಿಸುವ ಹಾಗೆಯೇ ಬೇರೆ ಪಕ್ಷಗಳ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.
75ನೇ ಗಣರಾಜ್ಯೋತ್ಸವದ ಅಂಗವಾಗಿ ಕೆಪಿಸಿಸಿ ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಮಾತಾಡಿದ ಖರ್ಗೆ ಅವರು ಪಕ್ಷಕ್ಕೆ ಸೇರಬಯಸುವವರ ಪೂರ್ವಪರ, ಅವರ ಗುಣ, ಚಾರಿತ್ರ್ಯ ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಒಗ್ಗಿಕೊಳ್ಳುತ್ತಾರೆಯೇ-ಈ ಅಂಶಗಳ ಪರಾಮರ್ಶೆ ನಡೆಸಿ ಅರ್ಹರಾಗಿದ್ದರೆ ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಈ ಮೂಲಕ ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ತತ್ವ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳಲ್ಲ, ದೇಶದ ಐಕ್ಯತೆಗಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ತಮ್ಮ ಪ್ರಾಣಗಳನ್ನು ಬಲಿದಾನ ಮಾಡಿದ್ದನ್ನು ಯಾರೂ ಮರೆಯಬಾರದು, ಕಾಂಗ್ರೆಸ್ ಬಡವರು, ದಲಿತರು, ಕೃಷಿಕರು, ಶೋಷಿತರು ಮತ್ತು ಮಹಿಳೆಯರ ಬಗ್ಗೆ ಕಾಳಜಿ ಮತ್ತು ಗೌರವ ಹೊಂದಿರುವ ಪಕ್ಷ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.