ಬೆಂಗಳೂರು : ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಒಂದು ಕಡೆ ಬಿಜೆಪಿ ಬಣ ಬಡಿದಾಟ ಶುರುವಾಗಿದ್ದರೆ, ಇನ್ನೊಂದು ಕಡೆ ತೆರೆಮರೆಯಲ್ಲಿ ಕಾಂಗ್ರೆಸ್ ನಲ್ಲಿ ಕೂಡ ಬಣ ಬಡಿದಾಟದ ಶೀತಲ ಸಮರ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಎಂದು ಕೆಲವರು ಹೇಳಿದರೆ, ಕೆಲವು ಕಾರ್ಯಕರ್ತರು ನೆಕ್ಸ್ಟ್ ಸಿಎಂ ಡಿಕೆ ಶಿವಕುಮಾರ್ ಎಂದು ಹೇಳುತ್ತಿದ್ದಾರೆ. ಇದರ ಮಧ್ಯ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಡಿಸಿಎಂ ಡಿಕೆ ಶಿವಕುಮಾರ್ ಖಂಡಿತ ಸಿಎಂ ಆಗುತ್ತಾರೆ ಆದರೆ ಅದಕ್ಕೆ ಸಿದ್ದರಾಮಯ್ಯ ಬೆಂಬಲ ಬೇಕು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ ಖಂಡಿತ ಸಿಎಂ ಆಗೇ ಆಗುತ್ತಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಾದರೆ ಸಿಎಂ ಸಿದ್ದರಾಮಯ್ಯರ ಬೆಂಬಲ ಬೇಕು. 10 ಶಾಸಕರನ್ನು ಇಟ್ಟುಕೊಂಡು ಯಾರು ಸಿಎಂ ಆಗಲು ಸಾಧ್ಯವಿಲ್ಲ. ಸಿಎಂ ರಾಜಿನಾಮೆ ಕೊಡುತ್ತಾರೆ ಎಂದು ಕೇಳಿ ಜನರಿಗೂ ಸಾಕಾಗಿದೆ ಬಿಡಿ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಹೇಳಿಕೆ ನೀಡಿದರು.