ಬೆಂಗಳೂರು: ಬಿಜೆಪಿ -ಜೆಡಿಎಸ್ ಸೋಲುತ್ತೇವೆ ಎಂಬ ಭಯದಿಂದಲೇ ಮೈತ್ರಿ ಮಾಡಿಕೊಂಡಿದ್ದಾರೆ. ಮೈತ್ರಿ ಮಾಡಿಕೊಂಡಿದ್ದರೂ ಕೂಡ ಪುಟ್ಟಣ್ಣ ಅವರು ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪುಟ್ಟಣ್ಣ ಅವರಿಂದ ನಾಮಪತ್ರ ಸಲ್ಲಿಕೆಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಪುಟ್ಟಣ್ಣ ವಿಧಾನಸಭಾ ಚುನಾವಣೆಗೆ ನಿಲ್ಲಲು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಜೀನಾಮೆ ಕೊಟ್ಟಿದ್ದ ಕ್ಷೇತ್ರವಿದು. ಉಪಚುನಾವಣೆಗೆ ಐದನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. ಹಿಂದೆಯೂ ಬಿಜೆಪಿ, ಜೆಡಿಎಸ್ ಸ್ಪರ್ಧೆ ಮಾಡಿದ್ದರೂ ಆದರೂ ಬಿಜೆಪಿ, ಜೆಡಿಎಸ್ ನವರನ್ನು ಸೋಲಿಸಿ ಪುಟ್ಟಣ್ಣ ಗೆದ್ದಿದ್ದರು. ಸತತವಾಗಿ ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರದಿಂದ ಗೆಲ್ಲಬೇಕೆಂದರೆ ಶಿಕ್ಷಕರ ಬೆಂಬಲವನ್ನು ಪಡೆದಿದ್ದು, ಅವರ ಮನಸ್ಸನ್ನು ಗೆದ್ದಿದ್ದಾರೆ. ಹಾಗಾಗಿ ಅವರನ್ನು ಶಿಕ್ಷಕರು ಒಪ್ಪಿದ್ದಾರೆ ಎಂದರು.
ಜೆಡಿಎಸ್ – ಬಿಜೆಪಿ ಜನರಿಗೆ ಪ್ರಚೋದನೆ ನೀಡಿ ಗಲಾಟೆ ಶಾಂತಿ ಕದಡಿದ್ದಾರೆ
ಮಂಡ್ಯ ಘಟನೆಯ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿಯವರು ಪತ್ರಿಕಾಗೋಷ್ಠಿ ನಡೆಸಿ ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಕುಮಾರಸ್ವಾಮಿಯವರೇ ಪ್ರಚೋದನೆ ಮಾಡಿ ಗಲಾಟೆ ಮಾಡಿಸಿದ್ದಾರೆ. ಜೆಡಿಎಸ್ – ಬಿಜೆಪಿ ಜನರಿಗೆ ಪ್ರಚೋದನೆ ನೀಡಿ ಗಲಾಟೆ ಶಾಂತಿ ಕದಡಿದ್ದಾರೆ. ಕುಮಾರಸ್ವಾಮಿ ಹಾಗೂ ಬಿಜೆಪಿ ತಪ್ಪು ಎನ್ನುವುದು ಸ್ಪಷ್ಟವಾಗಿದೆ. ಪಂಚಾಯತಿಯಲ್ಲಿ ಧ್ವಜಸ್ತಂಭದ ಮೇಲೆ ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸಿ ಎಂದು ಅನುಮತಿ ನೀಡಲಾಗಿದೆ. ಈ ಬಗ್ಗೆ ಮುಚ್ಚಳಿಕೆಯನ್ನು ಅವರು ಬರೆದುಕೊಟ್ಟಿದ್ದಾರೆ. ಅದರೊಂದಿಗೆ ಯಾವುದೇ ಪಕ್ಷದ, ಧರ್ಮದ ಧ್ವಜವನ್ನು ಹಾರಿಸಬಾರದು ಎಂದೂ ಕೂಡು ತಿಳಿಸಲಾಗಿದೆ. ಆದರೆ ಇವರು ಭಗವಧ್ವಜ ಹಾರಿಸಿದ್ದಾರೆ. ಅದರಿಂದ ಅಶಾಂತಿ ನಿರ್ಮಾಣವಾಗುವಂತೆ ಮಾಡಿದ್ದಾರೆ. ಇದರ ಪರವಾಗಿ ಬಂದಿರುವವರು ಹೆಚ್.ಡಿ.ಕುಮಾರಸ್ವಾಮಿ, ಸಿ.ಟಿ.ರವಿಯವರು. ತಪ್ಪು ಯಾರದ್ದು ಹಾಗಾದರೆ ಎಂದು ಪ್ರಶ್ನಿಸಿದರು.