ನವದೆಹಲಿ: ತಮಿಳುನಾಡು ಮಾಜಿ ಸಿಎಂ ಜೆ ಜಯಲಲಿತಾ ಅವರ ಸಾವಿನ ನಂತ್ರ, ಅವರಿಗೆ ನೀಡಿದ ಚಿಕಿತ್ಸೆ ನೀಡಿದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ ಏಮ್ಸ್ ವೈದ್ಯರ ಸಮಿತಿಯು ಈಗ ಅಪೋಲೋ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿದೆ. ಸಮಿತಿಯು ತನ್ನ ವರದಿಯಲ್ಲಿ “ಮಾಜಿ ಸಿಎಂಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಿದೆ ಮತ್ತು ಅವರು ಒದಗಿಸಿದ ಆರೈಕೆಯಲ್ಲಿ ಯಾವುದೇ ದೋಷಗಳು ಕಂಡುಬಂದಿಲ್ಲ” ಎಂದು ಹೇಳಿದೆ.
ಜಯಲಲಿತಾ ಅವರು 5 ಡಿಸೆಂಬರ್ 2016 ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಸೆಪ್ಟೆಂಬರ್ 2017 ರಲ್ಲಿ, ಎಐಎಡಿಎಂಕೆಯ ತಮಿಳುನಾಡು ಸರ್ಕಾರವು ಮಾಜಿ ಮುಖ್ಯಮಂತ್ರಿ ಸಾವಿನ ಬಗ್ಗೆ ತನಿಖೆ ಮಾಡಲು ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಅರುಮುಘಸ್ವಾಮಿ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ನೇಮಿಸಿತು.
ನವೆಂಬರ್ 2021 ರಲ್ಲಿ, ಉನ್ನತ ನ್ಯಾಯಾಲಯವು ಆಯೋಗಕ್ಕೆ ಸಹಾಯ ಮಾಡಲು AIIMS ನಿಂದ ಪರಿಣಿತ ವೈದ್ಯರ ಸಮಿತಿಯನ್ನು ನೇಮಿಸಿತು. ವೈದ್ಯಕೀಯ ಮಂಡಳಿಯು ಈ ತಿಂಗಳ ಆರಂಭದಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ. ಸಮಿತಿಯು ಆಗಸ್ಟ್ 4 ರಂದು ತನ್ನ ವರದಿಯಲ್ಲಿ “ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷಗಳು ಕಂಡುಬಂದಿಲ್ಲ” ಎಂದು ಹೇಳಿದೆ.
ಡಿಸೆಂಬರ್ 2016 ರಲ್ಲಿ ಜಯಲಲಿತಾ ಅವರ ನಿಧನದ ನಂತರ, ಅಪೋಲೋ ಆಸ್ಪತ್ರೆಯು ಚಿಕಿತ್ಸೆ ನೀಡಿರುವ ವಿವರವಾದ ಹೇಳಿಕೆಯನ್ನು ನೀಡಿದೆ.
ಜಯಲಲಿತಾ ಅವರು ಅಪೊಲೋ ಆಸ್ಪತ್ರಗೆ ದಾಖಲಾಗುವ ಮೊದಲು ಜ್ವರ, ನಿರ್ಜಲೀಕರಣ ಮತ್ತು ಮಧುಮೇಹ, ಎಟೊಪಿಕ್ ಡರ್ಮಟೈಟಿಸ್ (ಚರ್ಮದ ತುರಿಕೆ), ಹೈಪೋಥೈರಾಯ್ಡ್ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ 2016ರ ಸೆ. 22ರಂದು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಸಮಿತಿ ಹೇಳಿದೆ.
ಕೆಲವು ದಿನಗಳ ನಂತ್ರ ಗಣನೀಯವಾಗಿ ಅವರು ಚೇತರಿಸಿಕೊಂಡರು. ಇದರ ಆಧಾರದ ಮೇಲೆ,ಅವರನ್ನು ಸುಧಾರಿತ ಕ್ರಿಟಿಕಲ್ ಕೇರ್ ಯೂನಿಟ್ನಿಂದ ಹೈ ಡಿಪೆಂಡೆನ್ಸಿ ಯೂನಿಟ್ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರ ಆರೋಗ್ಯ ಸುಧಾರಿಸುತ್ತಲೇ ಇತ್ತು. ಆದ್ರೆ, ದುರದೃಷ್ಟವಶಾತ್ 2016 ರ ಡಿಸೆಂಬರ್ 4 ರ ಸಂಜೆ ಭಾರೀ ಹೃದಯ ಸ್ತಂಭನಕ್ಕೆ ಒಳಗಾದ ನಂತ್ರ, ಚಿಕಿತ್ಸೆ ಮುಂದುವರೆಸಲಾಗಿತ್ತು. ಆದ್ರೆ, 5.12.2016 ರಾತ್ರಿ 11:30 ಕ್ಕೆ ಜಯಲಲಿತಾ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು.