ಬೆಂಗಳೂರು: ತಮ್ಮ ಅಧೀನದಲ್ಲಿ ಬರುವ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳಲ್ಲಿ ನೂರಕ್ಕೆ ನೂರರಷ್ಟು ಕಡತ ವಿಲೇವಾರಿ ಮಾಡುವ ಮೂಲಕ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಚೊಚ್ಚಲ ‘ಜನೋತ್ಸವ’ದ ಸಂಭ್ರಮವನ್ನ ಅರ್ಥಪೂರ್ಣವಾಗಿ ಆಚರಿಸಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.
ಇದು ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರಕಾರವು ಅಳವಡಿಸಿ ಕೊಂಡಿರುವ ತ್ವರಿತ ಮತ್ತು ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಹಿಂದೆ ಯಡಿಯೂರಪ್ಪನವರು ಎರಡು ವರ್ಷಗಳ ಆಳ್ವಿಕೆ ಪೂರೈಸಿದಾಗಲೂ ಇವರು ಇದೇ ಸಾಧನೆ ಮಾಡಿ, ಗಮನ ಸೆಳೆದಿದ್ದರು.
ಲಭ್ಯ ವರದಿಗಳ ಪ್ರಕಾರ, ಬುಧವಾರ ರಾತ್ರಿ 8 ಗಂಟೆ ಹೊತ್ತಿಗೆ ಅಶ್ವತ್ಥ ನಾರಾಯಣ ಅವರು ನಿರ್ವಹಿಸುತ್ತಿರುವ ಮೂರೂ ಇಲಾಖೆಗಳಲ್ಲಿ ಯಾವೊಂದು ಕಡತವೂ ವಿಲೇವಾರಿಗೆ ಬಾಕಿ ಇರಲಿಲ್ಲ. ಹೀಗಾಗಿ ಗುರುವಾರದಿಂದ ಈ ಇಲಾಖೆಗಳಲ್ಲಿ ಹೊಸ ಕಡತಗಳ ಪರಿಶೀಲನೆ ಮತ್ತು ವಿಲೇವಾರಿ ಪ್ರಕ್ರಿಯೆ ಆರಂಭವಾಗಲಿದೆ.
‘ಬೊಮ್ಮಾಯಿಯವರ ಸರಕಾರಕ್ಕೆ ಒಂದು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ತಮ್ಮ ಅಡಿಯಲ್ಲಿರುವ ಇಲಾಖೆಗಳು ಮಾಡಿರುವ ಸಾಧನೆ ಗಮನಾರ್ಹವಾಗಿದೆ’ ಎಂದಿದ್ದಾರೆ.
‘ನಮಗೆ ಬರುವ ಯಾವ ಕಡತಗಳನ್ನೂ ಅನಗತ್ಯವಾಗಿ ಇಟ್ಟುಕೊಳ್ಳಬಾರದು ಎನ್ನುವ ನಿಯಮವನ್ನು ಆರೂ ಇಲಾಖೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಸುಗಮ ಮತ್ತು ಜನಪರ ಆಡಳಿತಕ್ಕೆ ಬಿಜೆಪಿ ಬದ್ಧವಾಗಿರುವುದರ ಸಂಕೇತವಿದು’ ಎಂದು ಸಚಿವರು ಹೇಳಿದ್ದಾರೆ.