ಚೆನ್ನೈ:ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷವು ಭರ್ಜರಿ ಜಯ ದಾಖಲಿಸಿ, ಅವರು ಮುಖ್ಯಮಂತ್ರಿಯಾಗುವುದು ಖಚಿತವಾದ ಬೆನ್ನಲ್ಲೇ, ಅವರ ನಟನೆಯ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಕನ್’ (Jana Nayagan) ಚಿತ್ರತಂಡ ವಿಜಯ್ ಅವರಿಗೆ ವಿಶಿಷ್ಟ ಗೌರವ ಸಲ್ಲಿಸಿದೆ. ಸಿನಿಮಾದ ಹೊಸ ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಅವರನ್ನು “ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್” ಎಂದು ಉಲ್ಲೇಖಿಸಲಾಗಿದ್ದು, ಈ ವಿಡಿಯೋ ಕ್ಲಿಪ್‌ಗಳು ಈಗ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿವೆ.
ಸಿನೆಮಾ ಮಂದಿರಗಳಲ್ಲಿ ‘ಜನ ನಾಯಕನ್’ ಚಿತ್ರದ ಪ್ರದರ್ಶನದ ವೇಳೆ ವಿಜಯ್ ಅವರ ಹೆಸರಿನ ಮುಂದೆ “Honourable Chief Minister of Tamil Nadu” ಎಂದು ಮೂಡಿಬರುತ್ತಿದ್ದಂತೆ ಅಭಿಮಾನಿಗಳು ಹರ್ಷೋದ್ಗಾರ ಮಾಡಿದ್ದಾರೆ. ಈ ದೃಶ್ಯಗಳ ವಿಡಿಯೋಗಳು ಎಕ್ಸ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡ್ ಆಗುತ್ತಿವೆ.
ಇತ್ತೀಚೆಗಷ್ಟೇ ನಡೆದ ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಬೆಂಬಲದೊಂದಿಗೆ ವಿಜಯ್ ಈಗ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ.
ವಿಶೇಷವೆಂದರೆ, ‘ಜನ ನಾಯಕನ್’ ಸಿನಿಮಾದ ಕಥೆಯೂ ಕೂಡ ರಾಜಕೀಯ ವ್ಯವಸ್ಥೆಯ ಬದಲಾವಣೆಯ ಸುತ್ತ ಸುತ್ತುತ್ತದೆ. ವಿಜಯ್ ಅವರು ನಿಜ ಜೀವನದಲ್ಲಿ ಮುಖ್ಯಮಂತ್ರಿಯಾಗುತ್ತಿರುವಾಗಲೇ ಸಿನಿಮಾದಲ್ಲೂ ಅದೇ ಬಿರುದು ಸಿಕ್ಕಿರುವುದು ಕಾಕತಾಳೀಯ ಹಾಗೂ ಅಭಿಮಾನಿಗಳಿಗೆ ಹಬ್ಬದಂತಾಗಿದೆ.








