ಬೆಂಗಳೂರು : ಜನೌಷಧಿ ಕೇಂದ್ರಗಳ ಸ್ಥಾಪನೆ ವಿಚಾರದಲ್ಲಿ ಒಂದು ಮಳಿಗೆಯಿಂದ ಮತ್ತೊಂದು ಮಳಿಗೆಯ ವ್ಯವಹಾರಕ್ಕೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕಾಗಿ ಮಧ್ಯಪ್ರವೇಶಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶೀಲಾ ಭಟ್ ಎಂಬುವರಿಗೆ ಜನೌಷಧಿ ಕೇಂದ್ರ ತೆರೆಯಲು ಅನುಮತಿಸಿರುವುದನ್ನು ಪ್ರಶ್ನಿಸಿ, ಅದೇ ಜಿಲ್ಲೆಯ ಪುತ್ತೂರು ತಾಲೂಕಿನ ಸವಿನಯ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರಾಗಿರುವ ಸವಿನಯ ಎಂಬುವರು ಶೀಲಾ ಭಟ್ ಎಂಬುವರಿಗೆ ಜನೌಷಧ ಕೇಂದ್ರ ತೆರೆಯಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದು, ಆದರೆ, ಸವಿನಯ ಅವರಿಗೆ ಜನೌಷಧಿ ಕೇಂದ್ರ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ಮಾತ್ರ ನೀಡಲಾಗಿದೆ. ಹೀಗಾಗಿ ತನಗೆ ಮಂಜೂರಾಗಿರುವ ಕೇಂದ್ರಕ್ಕೂ ಶೀಲಾ ಭಟ್ಗೆ ಮಂಜೂರಾಗಿರುವ ಕೇಂದ್ರದ ನಡುವಿನ ಅಂತರ ಒಂದು ಕಿಲೋ ಮೀಟರ್ ಒಳಗಿದೆ ಎಂಬುದಾಗಿ ವಾದಿಸುವ ಹಕ್ಕು ಹೊಂದಿಲ್ಲ. ಹೀಗಾಗಿ, ಶೀಲಾ ಭಟ್ಗೆ ಜನೌಷಧಿ ಕೇಂದ್ರ ತೆರೆಯಲು ಅನುಮತಿಸಿರುವುದರಲ್ಲಿ ಯಾವುದೇ ದೋಷ ಹುಡುಕಲಾಗದು ಎಂದು ಪೀಠ ಹೇಳಿದೆ.
ಅತ್ಯಂತ ಕಡಿಮೆ ಅಂತರದಲ್ಲಿ ಮತ್ತೊಂದು ಜನೌಷಧಿ ಕೇಂದ್ರ ತೆರೆಯಲು ಅನುಮತಿಸಿದರೆ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಸವಿನಯ ಬಿಂಬಿಸಿದ್ದಾರೆ. ಆದರೆ, ವಾಸ್ತವಿಕ ಚಿತ್ರಣ ಅದಲ್ಲ. ಆದರೆ, ಹಲವರಿಗಾಗಿ ರೂಪಿಸಿರುವ ಕಲ್ಯಾಣ ಕಾರ್ಯಕ್ರಮದ ಭಾವನೆಯನ್ನು ನ್ಯಾಯಾಲಯ ರಕ್ಷಿಸಬೇಕೆ ವಿನಾಃ ಕೆಲವರ ಭಾವನೆಯಲ್ಲ. ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂಬ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ಪೀಠ ಹೇಳಿದೆ.
ಅಲ್ಲದೆ, ಈ ಕಾನೂನಾತ್ಮಕವಾಗಿ ಫಲಪ್ರದವಾದ ಯೋಜನೆಯನ್ನು ವಿನಾಕಾರಣ ಅಡ್ಡಿಪಡಿಸುವುದು ಹಿತಾಸಕ್ತಿಗೆ ತೊಂದರೆ ನೀಡಿದಂತಾಗಲಿದೆ ಎಂದು ತಿಳಿಸಿರುವ ಹೈಕೋರ್ಟ್, 500 ಮೀಟರ್ ಅಂತರದಲ್ಲಿ ಎರಡು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ತೆರೆಯಲು ಅನುಮತಿಸಬಾರದು.ಎರಡು ಕೇಂದ್ರಗಳ ನಡುವಿನ ಭೌಗೋಳಿಕ ಪ್ರದೇಶದ ಅಂತರ ಕಡಿಮೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ರೀತಿಯ ಕ್ಷುಲ್ಲಕ ಕಾರಣಗಳ ಆಧಾರದಲ್ಲಿ ಕಾನೂನುತಾತ್ಮಕವಾಗಿ ಫಲಪ್ರದವಾದ ಯೋಜನೆಯನ್ನು ಬಹಿಷ್ಕರಿಸಿರುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಹಾನಿ ಮಾಡಿದಂತಾಗುತ್ತದೆ. ಎಂದು ಪೀಠ ಹೇಳಿತು.