ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಿರ್ ಪಂಜಾಲ್ನ ದಕ್ಷಿಣಕ್ಕೆ ಬರುವ ಸೂರನ್ಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೈಯದ್ ಮುಷ್ತಾಕ್ ಬುಖಾರಿ ದೀರ್ಘಕಾಲದ ಅನಾರೋಗ್ಯದ ನಂತರ ಬುಧವಾರ ಬೆಳಿಗ್ಗೆ ನಿಧನರಾದರು
ಅವರಿಗೆ 75 ವರ್ಷ ವಯಸ್ಸಾಗಿತ್ತು.ಬುಖಾರಿ ಅವರಿಗೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೃದಯಾಘಾತವಾಗಿದ್ದು, ಇದು ಅವರ ಸಾವಿಗೆ ಕಾರಣವಾಯಿತು ಎಂದು ವರದಿಯಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಅವರ ನಿಧನದ ಸುದ್ದಿಯನ್ನು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಹಂಚಿಕೊಂಡಿದ್ದಾರೆ. “ರಾಜಕೀಯ ಧುರೀಣ ಮತ್ತು ಸೂರನ್ಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀನಾಬ್ #Sayeed ಮುಷ್ತಾಕ್ ಬುಖಾರಿ ಸಾಹಿಬ್ ಅವರ ನಿಧನದ ಸುದ್ದಿ ಕೇಳಿ ಆಘಾತ ಮತ್ತು ತೀವ್ರ ನೋವಾಗಿದೆ. ಇದು ರಾಜೌರಿ ಮತ್ತು ಪೂಂಚ್ನ ಇಡೀ ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ. ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.”
ಹಿರಿಯ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮುಖಂಡ ಮತ್ತು ಸೂರನ್ಕೋಟೆಯಿಂದ ಎರಡು ಬಾರಿ ಶಾಸಕರಾಗಿರುವ ಬುಖಾರಿ, ಪಹಾರಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನದ ವಿಷಯದ ಬಗ್ಗೆ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಡಾ.ಫಾರೂಕ್ ಅಬ್ದುಲ್ಲಾ ಅವರೊಂದಿಗಿನ ಭಿನ್ನಾಭಿಪ್ರಾಯದ ನಂತರ ಪಕ್ಷದೊಂದಿಗಿನ ಸುಮಾರು ನಾಲ್ಕು ದಶಕಗಳ ಸಂಬಂಧವನ್ನು ಕಡಿದುಕೊಂಡರು. ಕೇಂದ್ರವು ಪಹಾರಿಗಳಿಗೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನವನ್ನು ನೀಡಿದ ನಂತರ ಅವರು ಈ ವರ್ಷದ ಫೆಬ್ರವರಿಯಲ್ಲಿ ಬಿಜೆಪಿಗೆ ಸೇರಿದರು.