ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನ ಸೋಮವಾರ ಬೆಳಿಗ್ಗೆ 11ಕ್ಕೆ ಆರಂಭವಾಗಿದ್ದು, ರಾಜ್ಯಪಾಲರ ಭಾಷಣ ಮುಗಿಯುತ್ತಿದ್ದಂತೆ ಬಿಜೆಪಿ ಶಾಸಕರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರೆ, ಕಾಂಗ್ರೆಸ್ ಸಚಿವ ಸಂತೋಷ್ ಜೈ ಭೀಮ್ ಎಂದು ಘೋಷಣೆ ಕೂಗಿದರು. ಇದೆ ವೇಳೆ ಬಿಜೆಪಿ ಸದಸ್ಯರು ಕೇಸರಿ ಶಾಲು ಧರಿಸಿ ಕಲಾಪದಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಬೆಳಿಗ್ಗೆ 11ಕ್ಕೆ ಸರಿಯಾಗಿ ವಿಧಾನಸಭೆ ಆಗಮಿಸಿದರು. ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ ಮತ್ತಿತರರು ರಾಜ್ಯಪಾಲರನ್ನು ಸ್ವಾಗತಿಸಿದರು. ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾತನಾಡಿದರು.
ಬಿಜೆಪಿಯ ಹಲವು ಸದಸ್ಯರು ಕೊರಳಿಗೆ ಕೇಸರಿ ಶಾಲು ಧರಿಸಿ ಸದನಕ್ಕೆ ಬಂದಿದ್ದರು. ಉಳಿದವರಿಗೆ ಸದನ ಪ್ರವೇಶಿಸುವ ಮೊದಲು ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿ ಸಿಬ್ಬಂದಿ ಕೇಸರಿ ಶಾಲುಗಳನ್ನು ವಿತರಿಸಿದರು. ಅವುಗಳನ್ನು ಧರಿಸಿ ಬಿಜೆಪಿ ಶಾಸಕರು ವಿಧಾನಸಭೆ ಪ್ರವೇಶಿಸಿದರು.
ಇದೇ ವೇಳೆ ಮಂಡ್ಯ ಶಾಸಕ ರವಿ ಗಣಿಗಗೆ ಬಿಜೆಪಿಯ ಶಾಸಕ ಮುನಿರತ್ನ ಅವರು ಕೇಸರಿ ಶಾಲು ಹಾಕಿದ್ದಾರೆ. ವಿಧಾನ ಮಂಡಲ ಅಧಿವೇಶನಕ್ಕೂ ಮುನ್ನ ಹೊರಗಡೆ ಆಭರಣದಲ್ಲಿ ಮುನಿರತ್ನ ಅವರನ್ನು ರವಿ ಗಣಿಗ ಭೇಟಿಯಾಗಿದ್ದಾರೆ ಈ ವೇಳೆ ತಮ್ಮ ಕೊರಳಲ್ಲಿದ್ದ ಕೇಸರಿ ಶಾಲನ್ನು ಮುನಿರತ್ನ ಅವರು ರವಿ ಗಣಿಗಗೆ ತೊಡಿಸಿದ್ದಾರೆ. ಈ ವೇಳೆ ಮುನಿರತ್ನ ಅವರು ಶಾಲು ಹಾಕ್ಲ ಎಂದು ಕೇಳಿದಾಗ ಅಯ್ಯೋ ಹಾಕಿ ನಾವು ಕೂಡ ಹಿಂದುಗಳೇ ಎಂದು ತಿಳಿಸಿದರು.