ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜೀವನ ಪೂರ್ವ ಪಶ್ಚಿಮದ ತತ್ವಜ್ಞಾನದ ಸಂಗಮವಾಗಿದೆ. ಮೋದಿಯವರ ಆಡಳಿತದ ಕಾಲದಲ್ಲಿ ನಾವೆಲ್ಲ ಇರುವುದು ನಮ್ಮ ಸೌಭಾಗ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ರಾಜ್ಯ ಬಿಜೆಪಿಯ ಆರ್ಥಿಕ ಪ್ರಕೋಷ್ಠ ಏರ್ಪಡಿಸಿದ್ದ ಕೇಂದ್ರದ ಮಾನವ ಸಂಪನ್ಮೂಲ ಸಾಮರ್ಥ್ಯ ನಿರ್ಮಾಣ ಆಯೋಗದ ಸದಸ್ಯ ಆರ್. ಬಾಲಸುಬ್ರಮಣ್ಯಂ ಅವರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಕುರಿತು ಬರೆದಿರುವ ಪವರ್ ವಿಥಿನ್ ಪುಸ್ತಕ ಪರಿಚಯ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ವ್ಯಕ್ತಿ ಮನದಾಳದಲ್ಲಿ ಅವರ ಬಗ್ಗೆ ವಿಶೇಷ ಭಾವನೆ ಇಟ್ಟುಕೊಳ್ಳಲೇಬೇಕು. ಚರಿಸ್ಮಾ ಇಸ್ ನಾಟ ಎ ಕಾಜ್ ಇಟ್ಸ್ ಕಾನ್ಸಿಕ್ವೆನ್ಸ್ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರೆ ಅವರು ನಿಮ್ಮ ಜೀವನದ ಭಾಗವಾಗುತ್ತಾರೆ. ಬಾಲಸುಬ್ರಮಣ್ಯಂ ಅವರು ಮೋದಿಯವರನ್ನು ಪ್ರಧಾನಿಯಾಗಿ ಬರೆದಿಲ್ಲ. ಅವರನ್ನು ಒಬ್ಬ ವ್ಯಕ್ತಿಯಾಗಿ ಬರೆದಿದ್ದಾರೆ ಎಂದರು.
ಯಾವುದೇ ವ್ಯಕ್ತಿ ಒಂದು ತೀರ್ಮಾನ ಮಾಡಲು ಎರಡು ಬಾರಿ ಮಾಡುತ್ತಾರೆ. ಮೊದಲು ತೀರ್ಮಾನ ಮಾಡಬೇಕೆಂದು ಮಾಡುತ್ತಾರೆ. ಮತ್ತೊಂದು ವಾಸ್ತವವಾಗಿ ಮಾಡುತ್ತಾರೆ. ಮೋದಿಯವರು ಭೇಟಿ ಬಚಾವೊ ಭೇಟಿ ಪಢಾವೊ ಯೋಜನೆ ಯಾಕೆ ತಂದಿದ್ದಾರೆ ಎನ್ನುವುದನ್ನು ಅವರು ನಮ್ಮ ಜೊತೆ ಒಂದು ಸಾರಿ ಹಂಚಿಕೊಂಡಿದ್ದರು. ಇವರು ಸಿಎಂ ಆಗಿದ್ದಾಗ ಒಂದು ಹಳ್ಳಿಗೆ ಹೋಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಹನ್ನೆರಡು ವರ್ಷದ ಒಂದು ಮಗು ತನ್ನ ತಾಯಿಯ ಜೊತೆ ಸಂವಾದ ಮಾಡುತ್ತದೆ. ಆ ಮಗು ತನ್ನ ತಾಯಿಗೆ ನೀನು ನನ್ನನ್ನು ನಾಲ್ಕೈದು ತಿಂಗಳು ಬೆಳೆಸಿದ್ದೀಯಾ, ಈಗ ನನ್ನನ್ನು ಕೊಲ್ಲಲು ತೀರ್ಮಾನ ಮಾಡಿದ್ದೀಯಾ, ನಾನು ನನ್ನ ಅಣ್ಣ ತಮ್ಮಂದಿರ ರೀತಿ ನಿನ್ನನ್ನು ತಂದೆಯನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ ನನ್ನನ್ನು ಕೊಲ್ಲಬೇಡ ಎಂದು ಮಗು ಹೇಳಿದ್ದು ಅವರ ಮನಸಿಗೆ ನಾಟಿತ್ತು, ಅದನ್ನು ವಿಡಿಯೊ ಮಾಡಿ ರಾಜ್ಯದ ತುಂಬ ಪ್ರಚಾರ ಮಾಡಿದ್ದರು. ಅದರಿಂದ ಗುಜರಾತ್ ನಲ್ಲಿ ಬ್ರೂಣಹತ್ಯೆ ಪ್ರಮಾಣ ಕಡಿಮೆಯಾಯಿತು. ಮೋದಿಯವರಿಗೆ ಎಲ್ಲವನ್ನೂ ಕೇಳಿಸಿಕೊಳ್ಳುವ ವ್ಯವಧಾನ ಇದೆ ಎಂದರು.
ಮೋದಿ ಅವರಿಗೆ ಮಾನವೀಯ ಗುಣ ಇದೆ. ಒಂದು ಕಾರ್ಯಕ್ರಮಕ್ಕೆ ನಾನು ಅವರು ಸ್ವಲ್ಪ ನಡೆದು ಹೋಗಬೇಕಾದ ಸಂದರ್ಭದಲ್ಲಿ ಅವರ ವೇಗಕ್ಕೆ ನಾನು ನಡೆಯಲಾಗದಿದ್ದಕ್ಕೆ ಅವರೇ ನಿಂತು ನನ್ನ ವೇಗಕ್ಕೆ ಅವರು ನಡೆದರು. ಒಬ್ಬ ಪ್ರಧಾನಿಗೆ ಎಷ್ಟು ಸೂಕ್ಷ್ಮಮನಸು ಇರಲು ಸಾಧ್ಯ. ಪ್ರಧಾನಿಯವರು ಈ ದೇಶ ಸೇವೆ ಮಾಡಲು ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳಿದ್ದನ್ನು ವಿರೋಧ ಪಕ್ಷದವರು ಲೇವಡಿ ಮಾಡಿದರು. ಆದರೆ, ಮೋದಿಯವರು ತಮ್ಮ ಜೀವನದ ಉದ್ದೇಶ ಅರ್ಥ ಮಾಡಿಕೊಂಡಿದ್ದಾರೆ. ಮೋದಿಯವರು ಬಹಳ ಗಂಭೀರವಾಗಿ ಇರುತ್ತಾರೆ ಎನ್ನುತ್ತಾರೆ. ಆದರೆ, ಅವರನ್ನು ಹತ್ತಿರದಿಂದ ನೋಡಿದವರಿಗೆ ಅವರು ಬಹಳ ತಮಾಷೆಯಾಗಿ ಇರುತ್ತಾರೆ. ಅವರ ಜೀವನ ಪ್ರಯಾಣ ಬಹಳ ಅದ್ಬುತವಾಗಿತ್ತು. ಬಾಲ್ಯದಲ್ಲಿ ಅವರ ಜೀವನ ಬಹಳ ಗೊಂದಲದಲ್ಲಿತ್ತು. ಮೊದಲು ಆರ್.ಎಸ್ ಎಸ್ ಸೇರಿ ದೇಶ ಸೇವೆ ಮಾಡಬೇಕು ಎಂದುಕೊಂಡರು, ನಂತರ ಆಧ್ಯಾತ್ಮದ ಕಡೆಗೆ ಹೋಗಬೇಕೆಂದು ಯೋಚಿಸಿದರು. ಆಗ ಅವರಿಗೆ ಆರ್ ಎಸ್ ಎಸ್ ಅವರ ದಾರಿ ಗುರಿ ತೋರಿಸಿತು. ವ್ಯಕ್ತಿ ಮತ್ತು ಒಂದು ಸಂಘಟನೆಯ ಉದ್ದೇಶ ಒಂದಾದರೆ ಉದಾತ್ತ ಧ್ಯೇಯ ಈಡೇರಿಸಲು ಸಾಧ್ಯವಾಗುತ್ತದೆ ಎಂದರು.
ಮೋದಿಯವರಿಗೆ ಎಲ್ಲದರ ಬಗ್ಗೆ ಮಾಹಿತಿ ಇದೆ. ಎಲ್ಲದರ ಬಗ್ಗೆಯೂ ಜ್ಞಾನ ಇದೆ. ರಸ್ತೆ ಬದಿಯ ವ್ಯಾಪಾರಿಯ ಜೀವನದ ಬಗ್ಗೆಯೂ ಅವರಿಗೆ ಮಾಹಿತಿ ಇದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಿದ್ದರು, ಐಎಂಎಫ್ ಜೊತೆ ಚೆನ್ನಾಗಿ ವ್ಯವಹಾರ ಮಾಡುತ್ತಿದ್ದರು. ಆದರೆ, ಕಾಡು ಕುರುಬರ ಬಗ್ಗೆ, ತಮಿಳು ಭಾಷೆಯ ಬಗ್ಗೆ, ಗ್ರಾಮೀಣ ಜನ ಜೀವನದ ಬಗ್ಗೆ ಅಷ್ಟೇ ಅಲ್ಲ ಪಂಜಾಬಿನ ಗ್ರಾಮೀಣ ಜನರ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಮೋದಿಯವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತ ಮ್ಯಾಗ್ನಾ ಕಾರ್ಟ್ ಕ್ಕಿಂತ ಮೊದಲು ಅನುಭವ ಮಂಟಪ ಇತ್ತು ಎಂದು ಅವರು ಹೇಳಿದ್ದರು. ಅಂದರೆ ಅವರು ಅದರ ಬಗ್ಗೆ ಓದಿಕೊಂಡಿದ್ದರು ಎಂದರು.
ನಾನು ಬಿಜೆಪಿ ಸೇರಿದಾಗ ಮೋದಿಯವರೇ ನನಗೆ ಬಿಜೆಪಿ ಶಾಲ್ ಹಾಕಿ ಎರಡು ಗಂಟು ಹಾಕಿದರು. ಒಂದು ಬಿಜೆಪಿ ಗಂಟು ಇನ್ನೊಂದು ಮೋದಿ ಗಂಟು, ಈ ಯಾವತ್ತೂ ಬಿಚ್ಚುವಂತಿಲ್ಲ ಎಂದು ಹೇಳಿದರು. ಅದು ನನ್ನ ಮೇಲೆ ಬಹಳ ಪರಿಣಾಮ ಬೀರಿದೆ ಎಂದು ಹೇಳಿದರು.
ಗುಜರಾತ್ ಸಿಎಂ ಆಗಿದ್ದಾಗ ಮೋದಿಯವರು ಒಂದ ಬಾರಿ ಬೆಂಗಳೂರಿಗೆ ಬಂದಾಗ ಅವರನ್ನು ಸ್ವಾಗತಿಸಲು ಯಡಿಯೂರಪ್ಪ ಅವರು ನನಗೆ ಸೂಚಿಸಿದ್ದರು, ನಾನು ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲೇ ಎಂಟು ಜನ ಸಚಿವರು ಹೋಗಿದ್ದರು. ಅಲ್ಲಿಂದ ಅವರೊಂದಿಗೆ ಕಾರಿನಲ್ಲಿ ಬೇರೆ ಸಚಿವರು ಕೂತಿದ್ದರು. ಅವರಿಗೆ ನೀವು ಬೇರೆ ಕಾರಿನಲ್ಲಿ ಬನ್ನಿ ಬೊಮ್ಮಾಯಿಯವರು ನನ್ನ ಸ್ವಾಗತಿಸಲು ಅಧಿಕೃತವಾಗಿ ನೇಮಕವಾಗಿದ್ದಾರೆ ಅವರು ನನ್ನ ಜೊತೆ ಕಾರಿನಲ್ಲಿ ಬರಲಿ ಎಂದು ಹೇಳಿದರು. ಹೊಟೆಲ್ ನಲ್ಲಿಯೂ ಸಚಿವರಿಗೆ ನೀವು ಇಲ್ಲಿ ಕುಳಿತರೆ ವಿಧಾನ ಸೌಧದಲ್ಲಿ ಕೆಲಸ ಮಾಡುವವರು ಯಾರು ಎಂದು ಅವರನ್ನು ಕಳುಹಿಸಿದರು ಎಂದು ಮೋದೊಯವರ ಜೊತೆಗೆ ನಡೆದ ಘಟನೆಗಳನ್ನು ನೆನಪಿಸಿಕೊಂಡರು.
ಅವರು ಪ್ರಧಾನಿಯಾದಾಗ ಅವರಿಗೆ ವಿಶ್ ಮಾಡಲು ಹೋದಾಗ ನನಗೆ ತಡವಾಗಿತ್ತು, ರಾಜ್ಯದ ನಾಯಕರು ವಿಶ್ ಮಾಡಿ ಬಂದಿದ್ದರು, ನನಗೆ ಅವಕಾಶ ಸಿಗುವುದಿಲ್ಲ ಅಂತ ಹೇಳಿದ್ದರು. ನಾನು ಒಂದು ನಿಮಿಷ ಅವಕಾಶ ಕೇಳಿದ್ದೆ ಅವರು ರಾತ್ರಿ ಹನ್ನೊಂದುವರೆಗೆ ಬರಲು ಹೇಳಿದ್ದರು. ಖುಷಿಯಾಗಿ ಅಷ್ಟೊತ್ತಿನಲ್ಲಿ ಅವರನ್ನು ಭೇಟಿ ಮಾಡಲು ಹೋದರೆ ಸುಮಾರು ಅರ್ಧ ಗಂಟೆ ಮಾತನಾಡಿ, ನಿಮ್ಮ ಮನಸಲ್ಲಿ ದೇಶಕ್ಕೆ ಒಂದು ಹೊಸ ಯೋಜನೆ ಯಾವುದಿದೆ ಹೇಳಿ ಎಂದರು.
ವಿಕಸಿತ ಭಾರತದ ಬಗ್ಗೆ ಸಂಸದೆ ಸುಪ್ರಿಯಾ ಸುಳೆ ಅವರು ಸಂಸತ್ತಿನಲ್ಲಿ ವಿಕಸಿತ ಭಾರತ ನೋಡಲು ನಾವ್ಯಾರು ಇರುವುದಿಲ್ಲ ಎಂದು ಹೇಳಿದ್ದರು, ಆದರೆ, ನಾನು ಮಾತನಾಡುವಾಗ ಮೋದಿಯವರು ಮುಂದಿನ ಪೀಳಿಗೆಗೆ ವಿಕಸಿತ ಭಾರತ ಬಿಟ್ಟು ಹೋಗಲು ಯೋಚಿಸುತ್ತಿದ್ದಾರೆ. ನಮ್ಮ ಮಕ್ಕಳಿಗೆ ಶಿಕ್ಷಣ, ಸುರಕ್ಷತೆ ಮತ್ತು ಆರೋಗ್ಯಯುತ ಜೀವನ ನೀಡಬೇಕೆಂದು ಅವರು ಬಯಸುತ್ತಾರೆ, ಅದನ್ನು ಜಾರಿಗೊಳಿಸಲು ವಿಕಸಿತ ಭಾರತದ ಯೋಜನೆ ಜಾರಿಗೊಳಿಸುತ್ತಿದ್ದಾರೆ ಎಂದು ಹೇಳಿದೆ. ಸುಪ್ರಿಯಾ ಅವರು ನನ್ನ ಮಾತನ್ನು ಒಪ್ಪಿಕೊಂಡರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುಸ್ತಕದ ಲೇಖಕ ಆರ್. ಬಾಲಸುಬ್ರಮಣ್ಯಂ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ದತ್ತಾತ್ರೆಯ, ಪ್ರಶಾಂತ್ ಜಿ.ಎಸ್. ಹಾಜರಿದ್ದರು.