ಬೆಂಗಳೂರು : ಶಾಲಾ ಗೋಡೆ, ಪುಸ್ತಕ, ನೋಟ್‌ಬುಕ್‌ಗಳ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಬರೆಸುವುದನ್ನು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ – ಕಾಲೇಜುಗಳ ಕಟ್ಟಡಗಳ ಗೋಡೆ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ ಬರೆಸಬೇಕು. ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಗೆ ಈ ಕುರಿತು ಮಾಹಿತಿ ನೀಡಬೇಕು. ಮಕ್ಕಳಿಗೆ ವಿತರಿಸುವ ಪಠ್ಯಪುಸ್ತಕಗಳ ಮೇಲೆ, ನೋಟ್‌ಬುಕ್‌ಗಳ ಎಲ್ಲ ಪುಟಗಳ ಕೆಳ ಭಾಗದಲ್ಲಿ ಸಹಾಯವಾಣಿ ಸಂಖ್ಯೆ ನಮೂದಿಸಬೇಕು ಎಂದು ಸೂಚಿಸಲಾಗಿದೆ.
ಪಾಲನೆ ಮತ್ತು ರಕ್ಷಣೆ ಅವಶ್ಯಕತೆ ಇರುವ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸುವ 24*7 ಉಚಿತ ಮಕ್ಕಳ ಸಹಾಯವಾಣಿ- 1098 ಕುರಿತು ಹೆಚ್ಚಿನ ಪ್ರಚಾರ ನೀಡುವ ಕುರಿತಂತೆ ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ಮಕ್ಕಳ ಘನತೆಯ ಬದುಕಿನ ನಿರ್ಮಾಣ ಮಾಡಬೇಕಾಗಿರುವುದರಿಂದ ಹಾಗೂ ಮಕ್ಕಳ ರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮಕ್ಕಳ ಸಹಾಯವಾಣಿ 1098 ಕುರಿತು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ಸೂಕ್ತ ಸ್ಥಳಗಳ ಮೇಲೆ ಗೋಡೆ ಬರಹ ಬರೆಸಲು ಹಾಗೂ ಎಲ್ಲಾ ಶಾಲೆಗಳ ವೆಬ್ಸೈಟ್ ನಲ್ಲಿ 1098 ಕುರಿತು ಮಾಹಿತಿ ಪ್ರಕಟಿಸಲು ಬೆಳಗಿನ ಶಾಲಾ ಅಸೆಂಬ್ಲಿ ಪ್ರಾರ್ಥನೆ ಸಮಯದಲ್ಲಿ ಮಕ್ಕಳಿಗೆ ಮಾಹಿತಿ ನೀಡಲು ಮಕ್ಕಳಿಗಾಗಿ ಸಿದ್ಧಪಡಿಸುವ ಎಲ್ಲಾ ಪುಸ್ತಕ ಹಾಗೂ ನೋಟ್ ಬುಕ್ಗಳ ಮೇಲೆ ಹಾಗೂ ಎಲ್ಲಾ ಪುಟಗಳ ಕೆಳ ಭಾಗದಲ್ಲಿ ಲೇಬರ್ ಮೇಲೆ ಈ ಮಾಹಿತಿ ಪ್ರಕಟಿಸಲು ಉಲ್ಲೇಖಿತ ಪತ್ರದಲ್ಲಿ ನಿರ್ದೇಶಿಸಲಾಗಿರುತ್ತದೆ.
ಈ ಸಂಬಂಧ ರಾಷ್ಟ್ರವ್ಯಾಪಿಯಲ್ಲಿ ಚಾಲ್ತಿಯಲ್ಲಿರುವ ಪಾಲನೆ ಮತ್ತು ರಕ್ಷಣೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸುವ 24*7 ಉಚಿತ ಮಕ್ಕಳ ಸಹಾಯವಾಣಿ-1098 ಕುರಿತು ಹೆಚ್ಚಿನ ಪ್ರಚಾರ ಮಾಡಿ ಸಂಕಷ್ಟದಲ್ಲಿ ಸಿಲುಕಿರುವ ರಕ್ಷಣೆ ಮತ್ತು ಪೋಷಣೆಗೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತುಸೇವೆಯನ್ನು ಒದಗಿಸಲು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವು ಪಡೆಯಬಹುದಾಗಿದೆ. ಈ ಸಂಖ್ಯೆಯು ಉಚಿತ ದೂರವಾಣಿ ಕರೆಯಾಗಿದ್ದು ಮಕ್ಕಳಾಗಲಿ ಅಥವಾ ಸಾರ್ನಜನಿಕರಾಗಲಿ ಕರೆ ಮಾಡಿ ತುರ್ತು ನೆರವು ಅಗತ್ಯವಿರುವ ಮಕ್ಕಳಿಗೆ ರಕ್ಷಣೆಯನ್ನು ಒದಗಿಸಬಹುದಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳ ಗೋಡೆಗಳ ಮಕ್ಕಳ ಸಹಾಯವಾಣಿ-1098 ಕುರಿತು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ಸೂಕ್ತ ಸ್ಥಳಗಳ ಮೇಲೆ ಗೋಡೆ ಬರಹ ಬರೆಸುವುದು. ಎಲ್ಲಾ ಶಾಲೆಗಳ ವೆಬ್ಸೈಟ್ ನಲ್ಲಿ 1098 ಕುರಿತು ಮಾಹಿತಿ ಪ್ರಕಟಿಸುವುದು ಮತ್ತು ಬೆಳಗಿನ ಶಾಲಾ ಅಸೆಂಬ್ಲಿ ಪ್ರಾರ್ಥನೆ ಸಮಯದಲ್ಲಿ ಮಕ್ಕಳಿಗೆ 1098 ಮಾಹಿತಿ ನೀಡಲು ಮಕ್ಕಳಿಗಾಗಿ ಸಿದ್ಧಪಡಿಸುವ ಎಲ್ಲಾ ಪುಸ್ತಕ ಹಾಗೂ ನೋಟ್ ಬುಕ್ಗಳ ಮೇಲೆ ಹಾಗೂ ಎಲ್ಲಾ ಪುಟಗಳ ಕೆಳ ಭಾಗದಲ್ಲಿ ಲೇಬಲ್ ಮೇಲೆ 1098 ಸೀಲ್ ಹಾಕಿ ವ್ಯಾಪಕ ಪ್ರಚಾರ ಮಾಡಲು ಸರ್ಕಾರಿ/ಖಾಸಗಿ ಶಾಲಾ ಮುಖ್ಯ ಶಿಕ್ಷಕರಿಗೆ ಸೂಕ್ತ ಕ್ರಮವಹಿಸಲು ನಿರ್ದೇಶನ ನೀಡಲು ಎಲ್ಲಾ ಅಧಿಕಾರಿಗಳಿಗೆ ಉಪನಿರ್ದೇಶಕರು(ಆಡಳಿತ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.