ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ವೈದ್ಯರು ಹಾಗೂ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲೇ ಕಡ್ಡಾಯವಾಗಿ ವಾಸ್ತವ್ಯ ಇರಬೇಕು. ಈ ನಿಯಮ ಮೀರಿದ್ರೇ ಅಂತವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ರಾಜ್ಯ ಸರ್ಕಾರ ಖಡಕ್ ಆದೇಶವನ್ನು ಹೊರಡಿಸಿದೆ.
ಇಂದು ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯ ಸರ್ಕಾರವು ತನ್ನ ಆರೋಗ್ಯ ನೀತಿ ಪ್ರಕಾರ ವಿವಿಧ ಹಂತಗಳಲ್ಲಿ ಅಂದರೆ ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು/ಜಿಲ್ಲಾ ಆಸ್ಪತ್ರೆಗಳ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ದಿಶೆಯಲ್ಲಿ ಆರೋಗ್ಯ ಸೇವೆಗಳ ಕನಿಷ್ಠ ಅವಶ್ಯಕ ಕಾರ್ಯಕ್ರಮಗಳಾದ ರೋಗನಿರೋಧಕ ಸೇವೆಗಳು, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗಗಳ ನಿವಾರಣೆ ಮತ್ತು ನಿರ್ಮೂಲನ ಕಾರ್ಯಕ್ರಮಗಳು, ಪರಿಸರ ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ, ಆರೋಗ್ಯ ಶಿಕ್ಷಣ ಮತ್ತು ಶಾಲಾ ಆರೋಗ್ಯ ಸೇವೆಗಳು, ಪ್ರಯೋಗಾಲಯ ಸೇವೆಗಳು ಹಾಗೂ ಇನ್ನೂ ಅನೇಕ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಒದಗಿಸಲಾಗುತ್ತಿದೆ ಎಂದಿದ್ದಾರೆ.
ಮೇಲ್ಕಂಡ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಾಗೂ ತುರ್ತು ಸೇವೆಗಳನ್ನು ಸಕಾಲದಲ್ಲಿ ಒದಗಿಸುವ ಸಲುವಾಗಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ಕಲ್ಪಿಸಲಾಗಿರುತ್ತದೆ. ವಸತಿ ಗೃಹ ಲಭ್ಯವಿಲ್ಲದ ಕಡೆ ಕೇಂದ್ರ ಸ್ಥಾನದಲ್ಲಿ ವಾಸಿಸಲು HRA ಸೌಲಭ್ಯವನ್ನು ನೀಡಲಾಗುತ್ತಿರುತ್ತದೆ. ವೈದ್ಯರು ಹಾಗೂ ಸಿಬ್ಬಂದಿಗಳು ಸರ್ಕಾರ ಒದಗಿಸಿದ ನಿಯೋಜಿತ ವಸತಿ ಗೃಹಗಳಲ್ಲಿ ವಾಸ್ತವ್ಯವಿರದೇ ಕಟ್ಟಡಗಳು ಶಿಥಿಲಗೊಂಡು ದುರಸ್ತಿ ಮಾಡದಷ್ಟು ಹಾಳಾಗುತ್ತಿದ್ದು, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿರುತ್ತದೆ. ವಿದ್ಯುಚ್ಛಕ್ತಿ ಬಿಲ್‌ಗಳನ್ನು ನಿಯಮಿತವಾಗಿ ಭರಿಸದೇ ಹೆಚ್ಚಿನ ಬಾಕಿ ಉಳಿಸಿಕೊಂಡಿರುವುದು ಸಹ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತುರ್ತು ಸೇವೆ ವ್ಯಾಪ್ತಿಗೆ ಒಳಪಡುತ್ತಿದ್ದು ವೈದ್ಯರು ಹಾಗೂ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರದೇ ಇರುವುದರಿಂದ ಸಾರ್ವಜನಿಕರು ಸಕಾಲದಲ್ಲಿ ವೈದ್ಯಕೀಯ ತುರ್ತು ಸೇವೆ ಪಡೆಯಲು ವಂಚಿತರಾಗುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಮಾಧ್ಯಮಗಳಿಂದ ಪದೇ ಪದೇ ಅನೇಕ ಮನವಿ/ದೂರುಗಳು ಸ್ವೀಕೃತವಾಗುತ್ತಿದೆ ಹಾಗೂ ಇದರೊಂದಿಗೆ ವಸತಿ ಗೃಹ ಒದಗಿಸಿರುವ ಉದ್ದೇಶ ವಿಫಲವಾಗುತ್ತಿದೆ. ಕೇಂದ್ರ ಸ್ಥಾನದಲ್ಲಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರಿಗೆ ಚಿಕಿತ್ಸೆಯನ್ನು ಸಕಾಲದಲ್ಲಿ ನೀಡದೇ ಹಲವಾರು ಸಾವು, ನೋವುಗಳು ಸಂಭವಿಸುತ್ತಿದ್ದು, ಸಾರ್ವಜನಿಕರಲ್ಲಿ ಇಲಾಖೆಯ ಬಗ್ಗೆ ಋಣಾತ್ಮಕ ಭಾವನೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ಉಲ್ಲೇಖಿತ ಸುತ್ತೋಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ ನಿಯಮ 1966ರ ನಿಯಮ 19ರ ಪ್ರಕಾರ ಪ್ರತಿ ಸರ್ಕಾರಿ ನೌಕರರು ತನ್ನ ಕರ್ತವ್ಯ ನಿರ್ವಹಣೆಗಾಗಿ ಸರ್ಕಾರ ನೀಡಿರುವ ಸವಲತ್ತುಗಳನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳುವುದು ಆದ್ಯ ಕರ್ತವ್ಯವಾಗಿರುತ್ತದೆ ಹಾಗೂ ಅದೇ ನಿಯಮಾವಳಿಗಳ ನಿಯಮ 3 (ii)ರ ಪ್ರಕಾರ ಸರ್ಕಾರಿ ನೌಕರನು ಯಾವಾಗಲೂ ಸರ್ಕಾರಿ ನೌಕರನಿಗೆ ತಕ್ಕದಲ್ಲದಂತಹ ಯಾವುದೇ ಕಾರ್ಯವನ್ನು ಮಾಡುವಂತಿಲ್ಲ. ಇಲ್ಲವಾದಲ್ಲಿ ಅದು ದುರ್ನಡತೆಯಾಗುತ್ತದೆ ಹಾಗೂ ತತ್ಪರಿಣಾಮವಾಗಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಆಫೀಲು) ನಿಯಮಗಳ ಪ್ರಕಾರ ಶಿಸ್ತು ಕ್ರಮಕ್ಕೆ ಒಳಗಾಗುತ್ತಾರೆ ಎಂದು ತಿಳುವಳಿಪಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಆದ್ದರಿಂದ, ಮೇಲ್ಕಂಡ ನಿಯಮಗಳನ್ನು ಸಂಬಂಧಪಟ್ಟ ವೈದ್ಯರು/ಸಿಬ್ಬಂದಿಗಳ ಗಮನಕ್ಕೆ ತರುತ್ತಾ, ಸರ್ಕಾರವು ಕಲ್ಪಿಸಿರುವ ಸರ್ಕಾರಿ ಸೌಕರ್ಯವನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಕಡ್ಡಾಯವಾಗಿ ವಸತಿ ಗೃಹ/ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡುವುದು ಹಾಗೂ ಸಾರ್ವಜನಿಕರ ತುರ್ತು ಸೇವೆಯಲ್ಲಿ ಯಾವುದೇ ಲೋಪವಾಗದಂತೆ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೇಂದು ಈ ಮೂಲಕ ತಿಳಿಸಲಾಗಿದೆ. ತಪ್ಪಿದಲ್ಲಿ ಸಂಬಂಧಪಟ್ಟ ವೈದ್ಯರು/ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮಜರುಗಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ