ಬೆಂಗಳೂರು: “ನಾಡು, ನುಡಿ, ನೆಲ, ಜಲದ ಹೋರಾಟಕ್ಕೆ ಚಿತ್ರರಂಗದ ಸಹಕಾರ, ಬೆಂಬಲ, ಬದ್ಧತೆ ಇರಬೇಕು. ಆದರೆ ಮೇಕೆದಾಟು ಹೋರಾಟಕ್ಕೆ ಚಿತ್ರರಂಗದಿಂದ ಸರಿಯಾದ ಸಹಕಾರ ಸಿಗದೇ ಹೋದದ್ದರ ಬಗ್ಗೆ ನೋವು ಮತ್ತು ಸಿಟ್ಟು ಇದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಹೇಳಿದರು.
ವಿಧಾನಸೌಧದ ಮುಂಭಾಗದಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಮಾತನಾಡಿದರು.
“ನನಗೆ ಸಿನಿಮಾರಂಗದವರ ಮೇಲೆ ಕೋಪ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ, ನಟರ ಮೇಲೆ ಸಿಟ್ಟಿದೆ. ನಾವು ಕಷ್ಟ ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ದೊರಕಿಸಲು “ನಮ್ಮ ನೀರು, ನಮ್ಮ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ಮಾಡಿದೆವು. ಕೋವಿಡ್ ಸಮಯದಲ್ಲಿ ನಾನು, ಸಿದ್ದರಾಮಯ್ಯ ಅವರು ಸುಮಾರು 150 ಕಿ.ಮೀ ಪಾದಯಾತ್ರೆ ಮಾಡಿದೆವು. ನಾವು ನಮ್ಮ ಸ್ವಂತಕ್ಕಾಗಿ ಈ ಹೋರಾಟ ಮಾಡಲಿಲ್ಲ. ರಾಜ್ಯದ ಹಿತಕ್ಕಾಗಿ ನಡೆದೆವು. ಆದರೆ ಖುದ್ದು ಆಹ್ವಾನ ಕೊಟ್ಟರೂ ಒಂದಿಬ್ಬರನ್ನು ಹೊರತುಪಡಿಸಿ ಚಿತ್ರರಂಗದವರು ತಿರುಗಿ ನೋಡಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಅಸೋಸಿಯೇಷನ್ ನಿಂದ ಕೆಲವರು ಮಾತ್ರ ಬಂದಿದ್ದರು. ಕಲಾವಿದರ ಪೈಕಿ, ಸಾಧು ಕೋಕಿಲ ಹಾಗೂ ದುನಿಯಾ ವಿಜಿ ಅವರನ್ನು ಬಿಟ್ಟರೆ ಮತ್ಯಾರು ಭಾಗವಹಿಸಲಿಲ್ಲ. ಕೆಲವರು ನಟರನ್ನು ಬಳಸಿಕೊಂಡು ನಂತರ ಬಿಸಾಡುತ್ತಾರೆ. ನಾವು ಆ ರೀತಿ ಮಾಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಾಧು ಕೋಕಿಲ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ನಮ್ಮ ಕಷ್ಟ ಕಾಲದಲ್ಲಿ ಯಾರು ನಮಗೆ ಸಹಾಯ ಮಾಡುತ್ತಾರೋ ಅವರನ್ನು ಗುರುತಿಸಬೇಕು. ನಮಗೆ ಎಲ್ಲ ರಂಗದಲ್ಲಿಯೂ ಯಾರ್ಯಾರ ನಾಡಿ ಮಿಡಿತ ಏನಿದೆ ಎಂಬುದರ ಅರಿವಿದೆ. ಕಷ್ಟ ಕಾಲದಲ್ಲಿ ಆಗದಿದ್ದ ಮೇಲೆ ಏನು ಪ್ರಯೋಜನ” ಎಂದು ಪ್ರಶ್ನಿಸಿದರು.
ಚಿತ್ರರಂಗದ ಕಾರ್ಯಕ್ರಮ ನಮ್ಮದು ಎಂಬ ಭಾವನೆ ಎಲ್ಲರಲ್ಲೂ ಬರಬೇಕು
“ಈ ಕಾರ್ಯಕ್ರಮವು ಇಲ್ಲಿ ವೇದಿಕೆ ಮೇಲಿರುವ ಕೆಲವು ಕಲಾವಿದರು ಹಾಗೂ ರಾಜಕಾರಣಿಗಳ ಮನೆ ಕಾರ್ಯಕ್ರಮವಲ್ಲ. ಚಿತ್ರರಂಗದ ಕಾರ್ಯಕ್ರಮ. ಆದರೆ ಕೆಲವೇ ಕೆಲವು ಪ್ರಮುಖರು ಮಾತ್ರ ಇದ್ದಾರೆ. ಇದು ಕನ್ನಡ ಸಿನಿಮಾ ರಂಗದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ನಟರು, ನಿರ್ಮಾಪಕರು, ನಿರ್ದೇಶಕರು, ಕಲಾವಿದರಲ್ಲದೆ ಮತ್ಯಾರು ಬರುತ್ತಾರೆ? ಶಿವರಾಜಕುಮಾರ್ ಅವರು ಇದನ್ನು ನಮ್ಮ ಮನೆಯ ಹಬ್ಬ ಎಂದು ಹೇಳಿದರು. ಆ ಭಾವನೆ ಚಿತ್ರರಂಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಪ್ರದರ್ಶಕರಿಗೆ ಇಲ್ಲವಾದರೆ, ನಿಮಗೇ ಆಸಕ್ತಿ ಇಲ್ಲವಾದರೆ ಈ ಚಲನಚಿತ್ರೋತ್ಸವವನ್ನು ಯಾಕೆ ಮಾಡಬೇಕು?” ಎಂದು ಕೇಳಿದರು.
“ಮುಂದಿನ ದಿನಗಳಲ್ಲಿಯಾದರೂ ಇಂತಹ ಕಾರ್ಯಕ್ರಮಗಳಿಗೆ ಚಿತ್ರರಂಗದ ಪ್ರಮುಖರು ಆಗಮಿಸಬೇಕು. ನಿಮ್ಮ ಕಾರ್ಯಕ್ರಮಕ್ಕೆ ನೀವೇ ಬರದಿದ್ದರೆ ಹೇಗೆ? ಇದನ್ನು ಎಚ್ಚರಿಕೆಯಂತಾದರೂ ಪರಿಗಣಿಸಿ ಅಥವಾ ಮನವಿ ಎಂದಾದರೂ ಪರಿಗಣಿಸಿ. ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ. ಸರ್ಕಾರ ಅನುಮತಿ ನೀಡದೆ ಇದ್ದರೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶವೇ ಸಿಗುವುದಿಲ್ಲ. ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ” ಎಂದು ತಿಳಿಸಿದರು.
ನನಗೂ ಚಿತ್ರರಂಗದ ನಂಟಿದೆ
“ಉತ್ತಮ ಸಾಹಿತ್ಯ, ಸಂಗೀತ, ಸಂಸ್ಕೃತಿಯೇ ನಮ್ಮ ದೇಶದ ಆಸ್ತಿ. ನಾನು ಚಿತ್ರ ಪ್ರದರ್ಶಕನಾಗಿದ್ದೆ. ಇಂದಿರಾ ಗಾಂಧಿ ಅವರ ಹೆಸರಲ್ಲಿ ಚಿತ್ರಮಂದಿರವನ್ನು ನಡೆಸಿದ್ದೆ. ಊರಲ್ಲಿ ನಾಲ್ಕು ಟೂರಿಂಗ್ ಟಾಕೀಸ್ ಇತ್ತು. ಈಗ ಅದು ನಿಲ್ಲಿಸಿದ್ದೇನೆ. ಇನ್ನು ನಮ್ಮ ಮಾಲ್ ಗಳಲ್ಲಿ 23 ತೆರೆಗಳ ಸಿನಿಮಾ ಕೇಂದ್ರಗಳಿವೆ. ಇವುಗಳಲ್ಲಿ ಒಂದರಲ್ಲೂ ಒಂದು ಸಿನಿಮಾ ನೋಡುವ ಸಮಯಾವಕಾಶ ಸಿಕ್ಕಿಲ್ಲ” ಎಂದರು.
“ನಾನು ಚಿತ್ರಮಂದಿರ ನಡೆಸುವಾಗ ಸಿನಿಮಾ ನೋಡಿಯೇ ಡಬ್ಬಾ ತೆಗೆದುಗೊಂದು ನಮ್ಮ ಊರಿನ ಚಿತ್ರ ಮಂದಿರದಲ್ಲಿ ಹಾಕುತ್ತಿದ್ದೆ. ಸತ್ಯ ಹರಿಶ್ಚಂದ್ರ ಸಿನಿಮಾವನ್ನು 15 ಬಾರಿ ನೋಡಿದ್ದೆ. ಮದುವೆಯಾದ ನಂತರ ನನ್ನ ಪತ್ನಿಯನ್ನು ಕರೆದುಕೊಂಡು ಈ ಸಿನಿಮಾ ತೋರಿಸಿದ್ದೆ” ಎಂದರು.
“ಬೇಕಾದಷ್ಟು ರಾಜಕಾರಣಿಗಳಿಗೂ ಚಿತ್ರರಂಗಕ್ಕೂ ನಂಟಿದೆ. ರಾಜಕಾರಣಿಗಳಲ್ಲಿ ಅನೇಕರು ತಮ್ಮ ಮಕ್ಕಳನ್ನು ಸಿನಿಮಾ ಮೂಲಕ ಜನರಿಗೆ ಪರಿಚಯಿಸಿ ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿದ್ದಾರೆ. ಕೆಲವರು ಯಶಸ್ವಿಯಾದರೆ, ಮತ್ತೆ ಕೆಲವರು ವಿಫಲವಾಗಿದ್ದಾರೆ. ನಮ್ಮ ರಾಜ್ಯದವರೇ ಆದ, ಜಯಲಲಿತಾ, ರಜನಿಕಾಂತ್ ಬೇರೆ ರಾಜ್ಯಗಳಲ್ಲಿ ಬೆಳೆದು ರಾಜ್ಯ ಹಾಗೂ ರಾಷ್ಟ್ರದ ನಾಯಕತ್ವ ವಹಿಸಿದ್ದಾರೆ. ಮುಖ್ಯಮಂತ್ರಿಗಳೂ ಆಗಿದ್ದಾರೆ” ಎಂದು ತಿಳಿಸಿದರು.
“ಕಲಾವಿದರು ಬಣ್ಣ ಹಚ್ಚಿ ನಟನೆ ಮಾಡಿದರೆ, ನಾವು ರಾಜಕಾರಣಿಗಳು ಬಣ್ಣ ಹಾಕಿಕೊಳ್ಳದೆ ನಿತ್ಯ ಸಿನಿಮಾ ಮಾಡುತ್ತಿದ್ದೇವೆ” ಎಂದು ಚಟಾಕಿ ಹಾರಿಸಿದರು.
ಬೆಂಗಳೂರಲ್ಲಿ ಐಫಾ ಆಯೋಜನೆಗೆ ಚರ್ಚೆ
“ಐಫಾ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲು ನಿನ್ನೆ ಒಂದು ತಂಡವೇ ಇಲ್ಲಿಗೆ ಆಗಮಿಸಿ ಸಭೆ ಮಾಡಲಾಗಿದೆ. ಮತ್ತೊಂದು ಸುತ್ತಿನ ಸಭೆ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ. ಕನ್ನಡ ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಹೀಗಾಗಿ ನಿಮಗೆ ಅಭಿನಂದನೆ ಸಲ್ಲಿಸಬೇಕು. ನಿಮ್ಮ ಪರಿಶ್ರಮದಿಂದ ಎಲ್ಲಾ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ”ಎಂದು ಹೇಳಿದರು.
“ಸಿನಿಮಾ, ನಿಮ್ಮ ಕಲೆ ಮೂಲಕ ಸರ್ಕಾರದ ಆಚಾರ ವಿಚಾರ ಪ್ರಚಾರ ಮಾಡುವುದು ನಿಮ್ಮ ಧರ್ಮ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಮ್ಮ ಮನೆಗಾಗಿ, ನಮ್ಮ ಪಕ್ಷದವರಿಗಾಗಿ ಮಾತ್ರ ಜಾರಿ ಮಾಡಿದ್ದೇವೆಯೇ? ಇದಕ್ಕಾಗಿ 56 ಸಾವಿರ ಕೋಟಿ ಹಣ ಪ್ರತಿ ವರ್ಷ ವಿನಿಯೋಗಿಸುತ್ತಿದ್ದೇವೆ. ಬಡ ಕುಟುಂಬಗಳಿಗೆ ಆರ್ಥಿಕ ಶಕ್ತಿ ಸಿಗಲಿ ಎಂದು ಈ ಯೋಜನೆ ಜಾರಿಗೆ ತಂದಿದ್ದೇವೆ” ಎಂದು ತಿಳಿಸಿದರು.
“ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಬೇಕು ಎಂಬುದು ಸಿಎಂ ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ಸಲ್ಲಿಕೆಯಾಗಿದ್ದ ಯೋಜನೆ ತಿರಸ್ಕಾರಗೊಂಡಿದ್ದು, ಬಜೆಟ್ ನಂತರ ಕೂತು ಚರ್ಚೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಫಿಲ್ಮ್ ಸಿಟಿ ಮಾಡಲಾಗುವುದು. ಕಲೆ ಯಾರಪ್ಪನ ಮನೆ ಆಸ್ತಿಯಲ್ಲ. ಯಾರು ಬೇಕಾದರೂ ಎಂತಹುದೇ ಎತ್ತರಕ್ಕೆ ಬೆಳೆಯಲು ಅವಕಾಶ ಇದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಶಸ್ವಿಯಾಗಿ ಸಾಗಲಿ. ಸಮಯ ಸಿಕ್ಕರೆ ನಾನು ಸಿನಿಮಾ ವೀಕ್ಷಣೆ ಮಾಡುತ್ತೇನೆ” ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ‘ಕಳಪೆ ಮೆಡಿಸಿನ್’ ತಡೆಗೆ ಮಹತ್ವದ ಕ್ರಮ: 17 ಲಕ್ಷ ಮೌಲ್ಯದ ‘ಔಷಧ ವಾಪಾಸ್’
ಅನಧೀಕೃತ ಸ್ವತ್ತುಗಳಿಗೆ ‘ಇ-ಖಾತಾ’ ನೀಡುವ ಕಾಯ್ದೆ ಮತ್ತು ನಿಯಮಗಳ ತಿದ್ದುಪಡಿ