ಬೆಂಗಳೂರು: ನೀವು ಬ್ರ್ಯಾಂಡ್ ಬೆಂಗಳೂರು ರೂಪಿಸದೇ ಇದ್ದರೂ ಪರವಾಗಿಲ್ಲ, ಬಾಂಬ್ ಬೆಂಗಳೂರು ಸೃಷ್ಟಿಸಬೇಡಿ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದಿಂದಲೇ ಬಾಂಬ್ ಸ್ಫೋಟ ನಡೆದಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಖಂಡಿಸಿದರು.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಆರ್.ಅಶೋಕ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲರೂ ತಲೆತಗ್ಗಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಾಂತಿಯ ತೋಟವನ್ನು ಕೆಡಿಸುವ ಭಯೋತ್ಪಾದಕ ಚಟುವಟಿಕೆ ರಾಜಧಾನಿಯಲ್ಲಿ ನಡೆದಿದೆ. ಆಡಳಿತ ಪಕ್ಷದ ಸಚಿವರು, ಶಾಸಕರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ನೀವು ಮತ ಹಾಕಿ, ನಾವು ನಿಮ್ಮನ್ನು ರಕ್ಷಿಸುತ್ತೇವೆ ಎಂಬಂತಹ ಮನಸ್ಥಿತಿಯನ್ನು ಸೃಷ್ಟಿಸಲಾಗಿದೆ. ಈ ಮೂಲಕ ಭಯೋತ್ಪಾದಕ ತಂಡಕ್ಕೆ ರಹದಾರಿ ನೀಡಲಾಗಿದೆ ಎಂದರು.
ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ. ಬಾಂಬ್ ಬೆಂಗಳೂರು ಎಂಬ ಕಳಂಕವನ್ನು ತರುವುದು ಬೇಡ. ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ದೇಶ, ವಿದೇಶಗಳ ಕಂಪನಿಗಳ ಜನರು ಬರುತ್ತಾರೆ. ಬೆಂಗಳೂರಿನ ವರ್ಚಸ್ಸು ಕಡಿಮೆ ಮಾಡಿ, ಅಭದ್ರತೆ ಮೂಡಿಸಿ, ಹೂಡಿಕೆ ಇಳಿಕೆ ಮಾಡಲು ಭಯೋತ್ಪಾದಕರು ಯೋಜಿಸಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಲೆಲ್ಲ ಪುಂಡು ಪೋಕರಿಗಳಿಗೆ ರೆಕ್ಕೆ ಬರುತ್ತದೆ. ಮುಸ್ಲಿಂ ಸಂಘಟನೆಗಳ ಪ್ರಕರಣ ಹಿಂಪಡೆಯುವಿಕೆ, ಶಿವಮೊಗ್ಗ ಹಾಗೂ ಕೋಲಾರದ ಘಟನೆಗೆ ಕ್ರಮ ವಹಿಸದಿರುವುದು ಮೊದಲಾದವುಗಳಿಂದಾಗಿಯೇ ಇಂತಹ ಅನಾಹುತ ನಡೆಯುತ್ತಿದೆ ಎಂದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರ ಬಗ್ಗೆ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದೆ. ಪಾಕಿಸ್ತಾನ ಜಿಂದಾಬಾದ್ ಎಂದರೂ ಕಾಂಗ್ರೆಸ್ ಶಾಸಕರು ಅವರ ಪರವಾಗಿ ನಿಂತರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಂತೂ ಇದು ತಿರುಚಿದ ವೀಡಿಯೋ ಎಂದಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟಿಸಿದವರನ್ನು ಬ್ರದರ್ ಎನ್ನುವ ಇವರು, ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಮಾಡಿದವರನ್ನು ಅಂಕಲ್ ಎನ್ನಬಹುದು. ದಯವಿಟ್ಟು ರಾಜ್ಯದ ಘನತೆಗೆ ಧಕ್ಕೆ ತರದೆ ಭದ್ರತೆ ಬಗ್ಗೆ ಗಮನಹರಿಸಿ ಎಂದರು.
ಆಡಳಿತ ಪಕ್ಷದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಪದೇ ಪದೆ ಇಂತಹ ಘಟನೆ ನಡೆದಾಗ ಶಾಂತಿ ಕದಡುತ್ತದೆ. ಕೂಡಲೇ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು. ಗುಪ್ತಚರ ದಳ ಬದುಕಿದ್ದರೆ, ಸರ್ಕಾರ ಬದುಕಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಿ. ಮತ ರಾಜಕಾರಣ ಬಿಟ್ಟು ಕ್ರಮ ವಹಿಸಿ. ದೇಶದ್ರೋಹದ ಸಂದರ್ಭದಲ್ಲೂ ಎಚ್ಚರವಾಗದಿದ್ದರೆ ಜನರು ಕ್ಷಮಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓಲೈಕೆ ರಾಜಕಾರಣ
ಈ ಘಟನೆ ನಡೆಯಲು ಓಲೈಕೆ ರಾಜಕಾರಣವೇ ಕಾರಣ. ಸರ್ಕಾರ ಕ್ರಮ ಕೈಗೊಳ್ಳಲು ನಾವೆಲ್ಲರೂ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಆರ್.ಅಶೋಕ ತಿಳಿಸಿದರು.
ಉದ್ಯೋಗ ವಾರ್ತೆ: ‘KPSC’ಯಿಂದ ‘364 ಭೂಮಾಪಕರ’ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
‘ರಾಜ್ಯ ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಪ್ರಥಮ ಅಧಿವೇಶನ ‘ಇಲಾಖಾ ಪರೀಕ್ಷೆ’ಗೆ ಅರ್ಜಿ ಆಹ್ವಾನ