ಬೆಂಗಳೂರು : SSLC ತೃತೀಯ ಭಾಷೆಯ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ತೃತೀಯ ಭಾಷೆ ಭಾಷಾವೈವಿಧ್ಯತೆ ಮತ್ತು ಬೌದ್ಧಿಕ ಬೆಳವಣಿಗೆಗೆ ಮುಖ್ಯ. ಗ್ರೇಡಿಂಗ್ ಶೈಕ್ಷಣಿಕ ಪ್ರಾಮುಖ್ಯತೆ ಮತ್ತು ವಿದ್ಯಾರ್ಥಿಗಳ ಆಸಕ್ತಿಯ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳವನ್ನು ಅವರು ಪತ್ರಮುಖೇನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಲೆಟರ್ ಬರೆದಿದ್ದು, ಸರ್ಕಾರದ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ತಿಳಿಸಲಾಗಿದೆ. SSLC ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳನ್ನು ನೀಡದೆ ಕೇವಲ ಗ್ರೇಡ್ ನೀಡುವ ನಿರ್ಧಾರವನ್ನು ಮರು ಪರಿಶೀಲಿಸಿ. ಭಾಷಾವೈವಿಧ್ಯತೆ, ಜಾಗೃತಿ, ಬೌದ್ಧಿಕ ಬೆಳವಣಿಗೆಯನ್ನು ಬೆಳೆಸುವಲ್ಲಿ ತೃತೀಯ ಭಾಷೆಯು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಗ್ರೇಡ್ ನೀಡಿದರೆ ಶೈಕ್ಷಣಿಕ ಪ್ರಾಮುಖ್ಯತೆ ಕಡಿಮೆ ಮಾಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ಸರ್ಕಾರದ ಈ ನಿರ್ಧಾರ ವಿದ್ಯಾರ್ಥಿಗಳು ಕಲಿಯುವ ಆಸಕ್ತಿಯ ಮೇಲೆ ಪರಿಣಾಮ ಬೀರಬಹುದು. ಶಿಕ್ಷಣದ ಮೇಲೆ ಬೀರುವ ಪರಿಣಾಮ ಬಗ್ಗೆ ಪೋಷಕರಿಗೂ ಆತಂಕ ಇದ್ದು, ರಾಜ್ಯಪಾಲರು ಈ ವಿಷಯವನ್ನು ಗಮನಿಸಿದ್ದಾರೆ. ಹೀಗಾಗಿ ಶೈಕ್ಷಣಿಕ, ಆಡಳಿತಾತ್ಮಕ ಅಂಶ ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಶೈಕ್ಷಣಿಕ ಉದ್ದೇಶಗಳಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿಎಸ್‌ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.








