ಬೆಂಗಳೂರು : ಕಮಲ್ ಹಾಸನ್ ಅವರು ತಮಿಳು ನಿಂದಲೇ ಕನ್ನಡ ಹುಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆಗೆ ಇದೀಗ ರಾಜ್ಯದಲ್ಲಿ ಕನ್ನಡಪರ ಹೋರಾಟಗಾರರು ಕಮಲ್ ಹಾಸನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದು, ಅವರ ಸಿನಿಮಾ ನಿಷೇಧ ಮಾಡುವಂತೆ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ನಟಿ ರಮ್ಯಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಕಮಲ್ ಹಾಸನ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಕಮಲ್ ಹಾಸನ್ ಅವರು ಒಂದು ಬಿಡು ಬೀಸು ಹೇಳಿಕೆಯನ್ನು ನೀಡಿದ್ದಾರೆ. ಆದರೆ ಆ ಮಾತ್ರಕ್ಕೆ ಅವರ ಸಿನಿಮಾ ಅನ್ನು ನಿಷೇಧ ಮಾಡಲು ಮುಂದಾಗಿರುವುದು ತುಸು ಅತಿರೇಕ ಅನಿಸುವುದಿಲ್ಲವೆ? ಎಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ರಮ್ಯಾ, ಡ್ರಾವಿಡ ಭಾಷೆಗಳ ಉಗಮದ ಚಾರ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ರಮ್ಯಾ ಹಂಚಿಕೊಂಡಿರುವ ಕೋಷ್ಠಕದ ಪ್ರಕಾರ ದ್ರಾವಿಡ ಭಾಷೆಯ ಮೂಲಕವೇ ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಇನ್ನೂ ಅನೇಕ ಉಪ ಭಾಷೆಗಳ ಉಗಮವಾಗಿದೆ.
ದ್ರಾವಿಡ ಭಾಷೆಗಳ ಅಡಿಯಲ್ಲಿಯೇ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳು ಬರುತ್ತವೆ. ನಮ್ಮ ಭಾಷೆಗಳು ಪರಸ್ಪರ ಸಾಮ್ಯತೆಗಳನ್ನು ಹೊಂದಿವೆ ಆದರೆ ಯಾವ ಭಾಷೆಯೂ ಇನ್ನೊಂದು ಭಾಷೆಗಿಂತಲೂ ಶ್ರೇಷ್ಠ ಎಂದಿಲ್ಲ. ಇನ್ನು ಕೆಲವರು ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದುಕೊಂಡಿರುವವರು ಇದ್ದಾರೆ. ಆದರೆ ಅದೂ ಸಹ ನಿಜವಲ್ಲ. ಏಕೆಂದರೆ ಸಂಸ್ಕೃತ ಇಂಡೋ-ಆರ್ಯನ್ ಭಾಷೆ. ಆದರೆ ನಾವು ದ್ರಾವಿಡರು. ಇಂಡೋ ಆರ್ಯನ್ನರು ಇಲ್ಲಿಗೆ ವಲಸೆ ಬರುವುದಕ್ಕೆ ಬಹಳ ವರ್ಷಗಳ ಮುಂಚೆಯೇ ನಾವು ಇಲ್ಲಿದ್ದೀವಿ ಎಂದಿದ್ದಾರೆ.
ಕಮಲ್ ಹಾಸನ್ ಅವರು ಒಂದು ಬಿಡು ಬೀಸು ಹೇಳಿಕೆಯನ್ನು ನೀಡಿದ್ದಾರೆ. ಆದರೆ ಆ ಮಾತ್ರಕ್ಕೆ ಅವರ ಸಿನಿಮಾ ಅನ್ನು ನಿಷೇಧ ಮಾಡಲು ಮುಂದಾಗಿರುವುದು ತುಸು ಅತಿರೇಕ ಅನಿಸುವುದಿಲ್ಲವೆ? ನಾವುಗಳು ಒಟ್ಟಾಗಿ ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು ಆದರೆ ಅದಕ್ಕೂ ಮುನ್ನ ನಾವು ಪರಸ್ಪರರಿಗೆ ಗೌರವ ಕೊಡುವುದನ್ನು ಕಲಿಯಬೇಕಿದೆ ಎಂದಿದ್ದಾರೆ.