ಭಾರತೀಯರ ಅಚ್ಚುಮೆಚ್ಚಿನ ತಿಂಡಿ ‘ನಮ್ಕೀನ್’ (ಖಾರ/ಮಿಕ್ಶ್ಚರ್) ಇತ್ತೀಚಿನ ದಿನಗಳಲ್ಲಿ ಕಲಬೆರಕೆಯ ಭೀತಿಯನ್ನು ಎದುರಿಸುತ್ತಿದೆ. ಚಹಾ ಬಿಡುವಿನ ಸಮಯ, ಹಬ್ಬ ಹರಿದಿನಗಳು, ಪ್ರಯಾಣ ಮತ್ತು ಸಾಮಾಜಿಕ ಸಮಾರಂಭಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಈ ಕುರುಕುಲು ತಿಂಡಿಗಳಲ್ಲಿ ಇತ್ತೀಚೆಗೆ ಕಳಪೆ ಗುಣಮಟ್ಟದ ಎಣ್ಣೆ, ಕೃತಕ ಬಣ್ಣಗಳು ಮತ್ತು ಹಳಸಿದ ಪದಾರ್ಥಗಳನ್ನು ಬಳಸಲಾಗುತ್ತಿದೆ.
ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಕಲಬೆರಕೆ ಇರುವ ನಮ್ಕೀನ್‌ಗಳನ್ನು ಪತ್ತೆಹಚ್ಚಲು ಮನೆಯಲ್ಲೇ ಮಾಡಬಹುದಾದ ಕೆಲವು ಸರಳ ಪರೀಕ್ಷೆಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ವಿವರ ಇಲ್ಲಿದೆ:
ಕಲಬೆರಕೆ ನಮ್ಕೀನ್ ಪತ್ತೆಹಚ್ಚುವುದು ಹೇಗೆ?
೧. ಬಣ್ಣವನ್ನು ಸೂಕ್ಷ್ಮವಾಗಿ ಗಮನಿಸಿ
ಅತಿಯಾದ ಜಗಮಗಿಸುವ ಅಥವಾ ಅಸ್ವಾಭಾವಿಕವಾಗಿ ಗಾಢವಾಗಿರುವ ಬಣ್ಣಗಳು (ಉದಾಹರಣೆಗೆ ಅತಿ ಹಳದಿ, ಕಿತ್ತಳೆ ಅಥವಾ ಕೆಂಪು ಸೇವ್/ಮಿಕ್ಶ್ಚರ್) ಕೃತಕ ಬಣ್ಣಗಳ ಬಳಕೆಯನ್ನು ಸೂಚಿಸುತ್ತವೆ. ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ತಿಂಡಿಗಳ ಬಣ್ಣ ಯಾವಾಗಲೂ ತಿಳಿಯಾಗಿಯೂ, ಹಿತವಾಗಿಯೂ ಇರುತ್ತದೆ.
೨. ತಿನ್ನುವ ಮುನ್ನ ವಾಸನೆ ನೋಡಿ
ತಾಜಾ ನಮ್ಕೀನ್ ಮಸಾಲೆಗಳು ಮತ್ತು ಉತ್ತಮ ಅಡುಗೆ ಎಣ್ಣೆಯ ಸುವಾಸನೆಯನ್ನು ಹೊಂದಿರುತ್ತದೆ. ಒಂದು ವೇಳೆ ಕಮಟು ವಾಸನೆ (Rancid smell), ರಾಸಾಯನಿಕಗಳ ವಾಸನೆ ಅಥವಾ ಹುಳಿ ವಾಸನೆ ಬರುತ್ತಿದ್ದರೆ, ಅದನ್ನು ಬಳಸಬೇಡಿ. ಪದೇ ಪದೇ ಬಳಸಿದ ಹಳೆಯ ಎಣ್ಣೆಯಿಂದ ತಯಾರಿಸಿದಾಗ ಇಂತಹ ಕಮಟು ವಾಸನೆ ಬರುತ್ತದೆ.
೩. ಗರಿಗರಿತನ ಮತ್ತು ವಿನ್ಯಾಸವನ್ನು ಪರೀಕ್ಷಿಸಿ
ಉತ್ತಮ ಗುಣಮಟ್ಟದ ತಿಂಡಿಗಳು ಹಗುರವಾಗಿಯೂ, ಗರಿಗರಿಯಾಗಿಯೂ ಇರುತ್ತವೆ. ಹಳಸಿದ ಅಥವಾ ಕಳಪೆ ಗುಣಮಟ್ಟದ ನಮ್ಕೀನ್‌ಗಳು ಮೆತ್ತಗೆ, ಜಗಿಯಲು ಕಷ್ಟವಾಗಿ ಅಥವಾ ಅತಿಯಾದ ಎಣ್ಣೆಯ ಜಿಡ್ಡಿನಿಂದ ಕೂಡಿರುತ್ತವೆ. ಕೆಲವು ಕೃತಕ ಫ್ಲೇವರ್ ಪೌಡರ್‌ಗಳು ನಾಲಿಗೆಯ ಮೇಲೆ ವಿಚಿತ್ರವಾದ ರುಚಿಯನ್ನು ಉಳಿಸುತ್ತವೆ.
೪. ಅತಿಯಾದ ಎಣ್ಣೆಯ ಜಿಡ್ಡು ಮತ್ತು ಹೊಳಪು
ಪ್ಯಾಕೆಟ್‌ನ ಒಳಭಾಗದಲ್ಲಿ ಅಥವಾ ಕೈಗೆ ಅತಿಯಾಗಿ ಎಣ್ಣೆಯ ಸ್ಟೇನ್ ಆಗುತ್ತಿದ್ದರೆ ಅದು ಕಳಪೆ ಹುರಿಯುವ ವಿಧಾನಕ್ಕೆ ಸಾಕ್ಷಿ. ಅಲ್ಲದೆ, ನಮ್ಕೀನ್‌ಗೆ ಅಸ್ವಾಭಾವಿಕ ಹೊಳಪು ನೀಡಲು ಕೃತಕ ಲೇಪನಗಳನ್ನು (Artificial Coatings) ಸ್ಪ್ರೇ ಮಾಡಿರುವ ಸಾಧ್ಯತೆ ಇರುತ್ತದೆ.
೫. ವಿಚಿತ್ರವಾದ ರುಚಿ
ಅತಿಯಾದ ಉಪ್ಪು ಅಥವಾ ಅತಿಯಾದ ಖಾರವನ್ನು ಕೆಲವೊಮ್ಮೆ ಹಳಸಿದ ಎಣ್ಣೆಯ ವಾಸನೆಯನ್ನು ಮುಚ್ಚಿಡಲು ಬಳಸಲಾಗುತ್ತದೆ. ತಿನ್ನುವಾಗ ಗಂಟಲಿನಲ್ಲಿ ಕಿರಿಕಿರಿ ಉಂಟಾದರೆ ಅಥವಾ ಲೋಹದಂತಹ (Metallic) ಕೆಮಿಕಲ್ ರುಚಿ ಸಿಕ್ರೆ ತಕ್ಷಣ ತಿನ್ನುವುದನ್ನು ನಿಲ್ಲಿಸಿ.
ಖರೀದಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು
ಪ್ಯಾಕೇಜ್ಡ್ ನಮ್ಕೀನ್ ಖರೀದಿಸುವಾಗ:
ಯಾವಾಗಲೂ ಪ್ಯಾಕೆಟ್‌ನ ಸೀಲ್ ಸರಿಯಾಗಿದೆಯೇ ಎಂದು ಪರಿಶೀಲಿಸಿ. ಹರಿದ ಅಥವಾ ಉಬ್ಬಿದ ಪ್ಯಾಕೆಟ್‌ಗಳನ್ನು ತೆಗೆದುಕೊಳ್ಳಬೇಡಿ. ಜೊತೆಗೆ ಈ ಕೆಳಗಿನ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಿ:
- ತಯಾರಿಸಿದ ದಿನಾಂಕ (Manufacturing Date) ಮತ್ತು ಅವಧಿ ಮುಗಿಯುವ ದಿನಾಂಕ (Expiry Date).
- FSSAI ಲೈಸೆನ್ಸ್ ವಿವರಗಳು.
- ಬಳಸಲಾದ ಪದಾರ್ಥಗಳ ಪಟ್ಟಿ ಮತ್ತು ಎಣ್ಣೆಯ ಪ್ರಕಾರ.
ಬಿಡಿ (Loose) ನಮ್ಕೀನ್ ಖರೀದಿಸುವಾಗ:
ತೆರೆದಿಟ್ಟ ನಮ್ಕೀನ್‌ಗಳು ಧೂಳು, ತೇವಾಂಶ ಮತ್ತು ಕೀಟಗಳಿಗೆ ಬೇಗನೆ ತುತ್ತಾಗುತ್ತವೆ. ಆದ್ದರಿಂದ:
- ಮಾರಾಟಗಾರನು ಸ್ವಚ್ಛತೆ ಕಾಪಾಡಿಕೊಂಡಿದ್ದಾನೆಯೇ ಎಂದು ನೋಡಿ.
- ಕಂಟೇನರ್‌ಗಳು ಅಥವಾ ಗಾಜಿನ ಜಾರ್‌ಗಳು ಸ್ವಚ್ಛವಾಗಿರಲಿ.
- ಹೆಚ್ಚು ವ್ಯಾಪಾರವಾಗುವ, ವಿಶ್ವಾಸಾರ್ಹ ಅಂಗಡಿಗಳಿಂದಲೇ ಖರೀದಿಸಿ.
ಮನೆಯಲ್ಲಿ ಸಂಗ್ರಹಿಸುವ ವಿಧಾನ
ಎಷ್ಟೇ ಉತ್ತಮ ಗುಣಮಟ್ಟದ ನಮ್ಕೀನ್ ಆದರೂ ಮನೆಯಲ್ಲಿ ಸರಿಯಾಗಿ ಸಂಗ್ರಹಿಸದಿದ್ದರೆ ಹಾಳಾಗುತ್ತದೆ. ಗಾಳಿಯಾಡದ (Airtight) ಡಬ್ಬಿಗಳಲ್ಲಿ, ನೇರ ಸೂರ್ಯನ ಬೆಳಕು ಮತ್ತು ತೇವಾಂಶವಿಲ್ಲದ ಜಾಗದಲ್ಲಿ ಇಡುವುದರಿಂದ ಇದು ದೀರ್ಘಕಾಲ ಗರಿಗರಿಯಾಗಿ ಉಳಿಯುತ್ತದೆ. ಮುಖ್ಯವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಪ್ಯಾಕೆಟ್ ತೆರೆದ ನಂತರ ಹೆಚ್ಚು ದಿನ ಇಟ್ಟುಕೊಳ್ಳಬೇಡಿ.
ಆರೋಗ್ಯವೇ ಭಾಗ್ಯ. ಸ್ವಲ್ಪ ಹೆಚ್ಚು ಹಣವಾದರೂ ಪರವಾಗಿಲ್ಲ, ಯಾವಾಗಲೂ ಪ್ರಮಾಣೀಕೃತ (Certified) ಮತ್ತು ಹೆಸರಾಂತ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನೇ ಆಯ್ಕೆ ಮಾಡಿ. ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿ ಆಹಾರ ಸೇವಿಸಿ!








