ಬೆಂಗಳೂರು : ಹಿಂದೂ ಸಮಾಜದಲ್ಲಿ ಅಸಮಾನತೆ ಇದೆ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಸಿ.ಟಿ.ರವಿ ಬಹಿರಂಗ ಪತ್ರ ಬರೆದು, ಅಸಮಾನತೆ ಹಿಂದೂ ಸಮಾಜದಲ್ಲಿ ಮಾತ್ರ ಇದೆಯೇ? ನಿಮ್ಮ ಕಾಂಗ್ರೆಸ್ ಪಕ್ಷದೊಳಗೆಯೇ ಅಸಮಾನತೆ ಇಲ್ವೇ? ಎಂಬ ಪ್ರಶ್ನೆ ಕೇಳಿದ್ದಾರೆ.
ಅಸಮಾನತೆ ಬರೀ ಹಿಂದೂ ಸಮಾಜದಲ್ಲಿ ಮಾತ್ರ ಇದೆಯಾ? ಉಳಿದ ಕಡೆಗಳಿಗೆ ಇಲ್ವಾ? ಅಸಮಾನತೆ ಶ್ರೀಮಂತ–ಬಡವರ ನಡುವೆಯೂ ಇದೆ. ವಿದ್ಯಾವಂತ–ಅವಿದ್ಯಾವಂತರ ನಡುವೆಯೂ ಇದೆ. ಒಂದೇ ಜಾತಿಯಲ್ಲಿ ಇದ್ದರೂ ವಿವಿಧ ಅಧಿಕಾರದ ಹುದ್ದೆಯಲ್ಲಿದ್ದವರ ನಡುವೆಯೂ ಇದೆ. ಅಸಮಾನತೆಗೆ ಹಲವು ಮುಖಗಳಿವೆ. ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಅಸಮಾನತೆ, ಅಧಿಕಾರದ ಅಸಮಾನತೆ, ಮತೀಯ ಅಸಮಾನತೆ.
ಕ್ರಿಶ್ಚಿಯನ್, ಮುಸ್ಲಿಮರಲ್ಲೂ ಅಸಮಾನತೆ ಇದೆ. ಅಮೆರಿಕದಲ್ಲಿ ವೈಟ್ ಅಂಡ್ ಬ್ಲಾಕ್ ಅನ್ನುವಂತಹ ಅಸಮಾನತೆ ಇದೆ. ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆಯ ಅಸಮಾನತೆ ಇದೇ ಅನ್ನುವ ಏಕೈಕ ಕಾರಣ ಕೊಟ್ಟು ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂಗಳನ್ನು ಮತಾಂತರ ಮಾಡಲಾಗಿದೆ. ಏಸು ಕ್ರಿಸ್ತರ ಎದುರು ಸಮಾನವಾಗಿ, ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಅಂದವರು ಹಿಂದೂ ಸಮಾಜದೊಳಗಿರುವ ಅಷ್ಟೂ ಜಾತಿಗಳ ಹಿಂದೆ ಕ್ರೈಸ್ತ ಎನ್ನುವ ಹೆಸರು ಸೇರಿಸಿ ಅಲ್ಲಿ ಮತ್ತೆ ಯಾಕೆ ಹಿಂದೂ ಸಮಾಜಕ್ಕೆ ಸಮಾನಾಂತರವಾದ ಜಾತಿ ವ್ಯವಸ್ಥೆ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದೀರಿ?
ನಿಮ್ಮ ಪಕ್ಷದ ನಾಯಕರು ಜಗತ್ತಿಗೇ ಸಮಾನತೆ ಮಿತೃತ್ವ, ಭ್ರಾತ್ರತ್ವದ ಪಾಠ ಮಾಡುತ್ತಾರೆ. ಆದರೆ ಅದನ್ನು ಪಾಲಿಸಬೇಕಾದ ನೈತಿಕ ಜವಾಬ್ದಾರಿ ಹೆಗಲಮೇಲೇರಿದಾಗ ಅಸಹಿಷ್ಣುಗಳಾಗಿ ತಾರತಮ್ಯವನ್ನು ತೋರುತ್ತೀರಿ. ಇದೇ ಕಾರಣಕ್ಕೆ ತಾನೇ ತಾವು ತಮ್ಮದೇ ಪಕ್ಷದ ರಾಜ್ಯ ಅದ್ಯಕ್ಷರ ಬಳಿಯಿಂದ ಬಹಿರಂಗವಾಗಿ ಕ್ಷಮಾಪಣೆ ಕೇಳಿಸಿದಿರಿ. ಅಷ್ಟಕ್ಕೂ ಅವರು ಮಾಡಿದ ತಪ್ಪೇನು? ಸದನದೊಳಗೆ “ನಮಸ್ಥೆ ಸದಾ ವತ್ಸಲೆ ಮಾತೃಭೂಮಿ” ಅಂದರು, ತಾಯಿ ಭಾರತೀಯ ಸ್ತುತಿ ನಿಮ್ಮಗಳಿಂದ ಸಹಿಸಲಾಗದೆ ಅಸಮಾನತೆ ತೋರಿದಿರಿ.
ಇನ್ನು ಗೃಹ ಸಚಿವರಾದ ಪರಮೇಶ್ವರ್ ಯಾರು ಅಸಮಾನತೆ ತೋರಿದ ಕಾರಣ ಚುನಾವಣೆಯಲ್ಲಿ ಸೋತು ಮುಖ್ಯಮಂತ್ರಿ ಆಗಲಿಲ್ಲ ಎಂದು ಬೇರೆಯಾಗಿ ಹೇಳಬೇಕಿಲ್ಲ. ಅದೆಷ್ಟು ಬಾರಿ ತಾವು ಸ್ವತ: ಅಸಮಾನತೆಗೆ ಗುರಿಯಾಗಿಲ್ಲ. ನಿಮ್ಮಪಕ್ಷದ ದೆಹಲಿನಾಯಕರೇ ನಿಮ್ಮನ್ನ ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ ಹೇಳಿ. ನಿಮ್ಮದೇ ಆಪ್ತ ವಲಯದಲ್ಲಿ ಅದನ್ನು ಹೇಳಿಕೊಂಡು ಹಲುಬಿದ್ದೀರಿ ಕೂಡ ಎಂದು ಬರೆದಿದ್ದಾರೆ.
ಅಸಮಾನತೆಯನ್ನು ಸಮರ್ಥಿಸುವ ಒಂದು ವೇದ ಮಂತ್ರ, ಒಂದು ವಚನ, ಒಂದು ದಾಸವಾಣಿಯನ್ನು ತೋರಿಸಿ. ವೇದಗಳಿರಬಹುದು, ವಚನಗಳಿರಬಹುದು, ದಾಸವಾಣಿ ಇರಬಹುದು ಇವೆಲ್ಲದರಲ್ಲೂ ಅಸಮಾನತೆಯನ್ನು ತೊಡೆದು ಹಾಕಲು ಸಂಪೂರ್ಣ ಪ್ರಯತ್ನ ಮಾಡಿದ್ದಾರೆ. ಅಸಮಾನತೆಯನ್ನು ತೊಳೆದು ಹಾಕಲು ಪ್ರಯತ್ನಿಸಿದ ಬುದ್ಧ, ಬಸವಣ್ಣ, ರಾಮಾನುಜಾಚಾರ್ಯ, ಕನಕದಾಸರಂತವರನ್ನೇ ಮುಂದಿಟ್ಟುಕೊಂಡು ಜಾತಿಯತೆ ಮಾಡುವವರಿಗೆ ಏನನ್ನ ಬೇಕು ಎಂದು ಪ್ರಶ್ನಿಸಿದ್ದಾರೆ.