ಬೆಂಗಳೂರು: ಕಾಂಗ್ರೆಸ್ ಸರ್ಕಾರ ಯಾವಾಗಲೂ ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಹೇಳಿಕೊಳ್ಳುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವೇ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಯುವ ನಿಧಿ ಯೋಜನೆ ಹಾಗೂ ನೇಮಕಾತಿಯ ಮೂಲಕ ಯುವಕರ ಮಧ್ಯದಲ್ಲಿ ದೊಡ್ಡ ಭರವಸೆಯನ್ನು ಮೂಡಿಸಿತ್ತು. ತಮ್ಮ ಚುನಾವಣಾ ಪ್ರಣಾಳಿಕೆಯ ಪುಟ ಸಂಖ್ಯೆ 47 ರಲ್ಲಿ ಯುವಕರಿಗೆ ಸರ್ಕಾರದ ಇಲಾಖೆಗಳಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳ ಭರ್ತಿಯನ್ನು ಕೇವಲ 1 ವರ್ಷದಲ್ಲಿ ಮಾಡುತ್ತೇವೆ ಎಂದು ತಿಳಿಸಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎಷ್ಟು ವರ್ಷಗಳಾಗಿದೆ ಸಿಎಂ ಮತ್ತು ಡಿಸಿಎಂ ಅವರೇ ಎಂದು ಕೇಳಿದರು.
2.5 ಲಕ್ಷ ಹುದ್ದೆಗಳನ್ನು 1 ವರ್ಷದಲ್ಲಿ ತುಂಬುತ್ತೇವೆ ಎಂದು ಹೇಳಿದ್ದು, ನೀವು ಅದನ್ನು ಏಕೆ ಭರ್ತಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗೆ ಇಳಿದು ಹೋರಾಟ ಮಾಡಿದ್ದಾರೆ ಹಾಗೂ ಬೆಂಗಳೂರಿನಲ್ಲಿ ಸಚಿವರ ಮನೆಯ ಮುಂದೆ ಎ.ಬಿ.ವಿ.ಪಿ. ಕಾರ್ಯಕರ್ತ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರ ಮಾತು ತಪ್ಪಿರುವುದಕ್ಕೆ ಇಂದು ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟವನ್ನು ಮಾಡುತ್ತಿದ್ದಾರೆ. ಈ ಹೋರಾಟವನ್ನು ರಾಜ್ಯ ಸರ್ಕಾರ ಕಡೆಗಣಿಸಬಾರದು ಎಂದು ಎಚ್ಚರಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡುವಾಗ ಯುವಜನರ ಮನಸ್ಥಿತಿ ಯಾವ ರೀತಿ ಇರುತ್ತದೆ; ಅವರ ಶ್ರಮ ಎಷ್ಟು ಇರುತ್ತದೆ; ಅವರ ನಿರೀಕ್ಷೆ ಏನು ಇರುತ್ತದೆ ಎಂಬುದು ನನ್ನ ಅನುಭವಕ್ಕೆ ಬಂದಿದೆ. ರಾಜ್ಯದ ಲಕ್ಷಾಂತರ ಯುವಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅರ್ಹತೆಗೆ ತಕ್ಕಂತೆ ಹುದ್ದೆ ನೀಡಿ ಎಂದು ಹೋರಾಟವನ್ನು ಕೈಗೊಂಡಿದ್ದಾರೆ. ಆ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಭವಿಷ್ಯದಲ್ಲಿ ಸರ್ಕಾರ ಚೆಲ್ಲಾಟ…
ಹೋರಾಟ ಮಾಡಿದ ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕುವ ನೀಚ ಮಟ್ಟಕ್ಕೆ ಈ ಸರ್ಕಾರ ಇಳಿದಿದೆ. ಕೇಸ್ ದಾಖಲಿಸಿರುವ ಬಗ್ಗೆ ಕೇಳುವುದಕ್ಕೆ ಬಿಜೆಪಿ ಹೋದಾಗ ಸಾಮಾನ್ಯ ಕೇಸ್ ದಾಖಲು ಮಾಡಿದ್ದೇವೆ ಎಂದು ಹೇಳುತ್ತಾರೆ. ಇದು ಸರ್ಕಾರದ ಅತ್ಯಂತ ಅಮಾನವೀಯ ನಡೆ ಎಂದು ಪಿ.ರಾಜೀವ್ ಅವರು ಆಕ್ಷೇಪಿಸಿದರು. ವಿದ್ಯಾರ್ಥಿಗಳ ಮೇಲೆ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ ಎಂದರೆ ಆ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚೆಲ್ಲಾಟವಾಡುತ್ತಿದೆ ಎಂದು ಅಥರ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಒಂದು ಬಾರಿ ಕೇಸ್ ದಾಖಲು ಆಯಿತು ಎಂದರೆ ಆ ವಿದ್ಯಾರ್ಥಿಯ ಸಿಂಧುತ್ವಕ್ಕೆ ತೊಂದರೆ ಆಗುತ್ತದೆ ಎಂದರು.
ಮನುಷ್ಯತ್ವ ಇರುವ ಸರ್ಕಾರ ವಿದ್ಯಾರ್ಥಿಗಳ ಮೇಲೆ ಕೇಸು ಹಾಕುವುದಕ್ಕೆ ಹೋಗುವುದಿಲ್ಲ. ಈ ಸರ್ಕಾರ ಹಾಕಿದ್ದರು ಅದನ್ನು ವಾಪಸ್ ಪಡೆಯಬೇಕು ಮತ್ತು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಯಾವುದೇ ಮೊಕದ್ದಮೆ ದಾಖಲಿಸಬಾರದು ಎಂದು ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ಜೆನ್-ಜೀ ಬಗ್ಗೆ ಮಾತನಾಡುತ್ತಾ ದೇಶಾದ್ಯಂತ ಅರಾಜಕತೆ ಸೃಷ್ಟಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅವರ ಸರ್ಕಾರದ ಅರಾಜಕತೆಗೆ ಮತ್ತು ನಿರುದ್ಯೋಗ ಸಮಸ್ಯೆ ಬಗ್ಗೆ ಮೊದಲು ಅವರು ಸ್ಪಷ್ಟೀಕರಣವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸಚಿವ ಮಧು ಬಂಗಾರಪ್ಪ ಅವರು ಅಧಿಸೂಚನೆ ಹೊರಡಿಸಿದ ದಿನಾಂಕ ಮತ್ತು ಆದೇಶ ದಿನಾಂಕಕ್ಕೆ ಏನು ವ್ಯತ್ಯಾಸ ಇದೆ ಎಂದು ಮೊದಲು ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಈ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ನೇಮಕಾತಿಯ ಒಂದೇ ಒಂದು ಅಧಿಸೂಚನೆಯನ್ನು ಹೊರಡಿಸಲಿಲ್ಲ. ಯಾವ ಭರವಸೆಯಿಂದ ನೀವು ವಿದ್ಯಾರ್ಥಿಗಳಿಗೆ ಮುಖ ತೋರಿಸಲು ಸಾಧ್ಯವಾಗುತ್ತದೆ ಎಂದು ಕೇಳಿದರು.
ಬಿಜೆಪಿ ಸರ್ಕಾರ ಇದ್ದಾಗ 15 ಸಾವಿರ ಶಿಕ್ಷಕರ ನೇಮಕಾತಿಯ ಅಧಿಸೂಚನೆಯನ್ನು ಮಾಡಿತ್ತು. ಇವರು ನೇಮಕಾತಿ ಆದೇಶವನ್ನು ಮಾತ್ರ ನೀಡಿದ್ದಾರೆ. ಆದರೆ ನಿಮ್ಮ ಅವಧಿಯಲ್ಲಿ ಒಂದೇ ಒಂದು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲು ಸಾಧ್ಯವಾಗಿದೆಯೇ?; ಅತಿಥಿ ಶಿಕ್ಷಕರನ್ನು ಕೊಡುವಂತಹ ಯೋಗ್ಯತೆ ಇಲ್ಲದ ಮಟ್ಟಕ್ಕೆ ಈ ಸರ್ಕಾರ ಇಳಿದಿದೆಯೇ ಎಂದು ಪ್ರಶ್ನಿಸಿದರು.
ಈ ರಾಜ್ಯದಲ್ಲಿ ಶಿಕ್ಷಣಕ್ಕೆ ಆದ್ಯತೆಯನ್ನು ಕೊಡಬೇಕು. 70727 ಶಿಕ್ಷಕರ ಹುದ್ದೆಗಳು ಖಾಲಿ ಇವೆÉ; ಕಾನೂನು ಸುವ್ಯವಸ್ಥೆ ಕಾಪಾಡುವ ಗೃಹ ಇಲಾಖೆಯಲ್ಲಿ 25 ಸಾವಿರ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು. ಹಾಗಾಗಿ ಧಾರವಾಡದಲ್ಲಿ ನಡೆದಂತಹ ಪದವೀದರರ, ವಿದ್ಯಾವಂತರ ಹೋರಾಟ; ಬೆಂಗಳೂರಿನಲ್ಲಿ ಸಚಿವರಿಗೆ ಹಾಕಿರುವ ಮುತ್ತಿಗೆ ಇದು ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯಾರ್ಥಿಗಳು ನೀಡಿರುವ ಎಚ್ಚರಿಕೆ ಘಂಟೆ ಎಂದು ಭಾವಿಸಬೇಕು ಎಂದು ತಿಳಿಸಿದರು.
ನಿಮ್ಮ ಮಾತಿನ ಮೇಲೆ ಭರವಸೆ ಇಟ್ಟು ವಿದ್ಯಾಭ್ಯಾಸ ಮಾಡುವ ಮಕ್ಕಳು ನಾಳೆ ರಸ್ತೆ ಮೇಲೆ ಕೂತು ವಿದ್ಯಾಭ್ಯಾಸ ಮತ್ತು ಅಲ್ಲಿಯೇ ಅಡುಗೆ ಮಾಡಿಕೊಂಡು ರಸ್ತೆಯಲ್ಲಿ ಮಲಗಿಕೊಳ್ಳುತ್ತೇವೆ ಎಂದು ಹೋರಾಟಕ್ಕೆ ಕರೆ ಕೊಟ್ಟರೆ ಸರ್ಕಾರ ಯಾವ ಸ್ಥಿತಿಗೆ ಹೋಗಬಹುದು ಎಂದು ಯೋಚಿಸಿ ಎಂದು ಹೇಳಿದರು.
ವಿದ್ಯಾರ್ಥಿಗಳು ಮತ್ತು ಯುವಕರನ್ನು ನಿರ್ಲಕ್ಷ್ಯ ಮಾಡಿದ ಯಾವುದೇ ಸರ್ಕಾರ ಉಳಿದಿಲ್ಲ. ಹಾಗಾಗಿ ಯುವಕರ, ವಿದ್ಯಾರ್ಥಿಗಳ ಆಕ್ರೋಶಕ್ಕೆ ಸರ್ಕಾರ ಬಲಿಯಾಗಬಾರದು. ತಕ್ಷಣ ಸರ್ಕಾರ 2.5 ಲಕ್ಷ ಹುದ್ದೆಗಳಿಗೆ ಒಂದು ದಿನ ತಡಮಾಡದೆ ನೇಮಕಾತಿ ಮಾಡಬೇಕು ಮತ್ತು ವಿದ್ಯಾರ್ಥಿಗಳ ಬೇಡಿಕೆಯಂತೆ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಬೇಕು ಒತ್ತಾಯಿಸಿದರು.