ಶಿವಮೊಗ್ಗ: ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಹೊಸ ಆಡಳಿತ ಮಂಡಳಿಯನ್ನು ನೇಮಕ ಮಾಡುವಂತೆ ಕೋರ್ಟ್ ಸೂಚಿಸಿತ್ತು. ಆದರೇ ಕೋರ್ಟ್ ಆದೇಶವನ್ನು ಪಾಲಿಸದ ಕಾರಣಕ್ಕೆ ಇದೀಗ ಹಾಲಿ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಆಡಳಿತ ಮಂಡಳಿಯ ಎಲ್ಲರಿಗೂ ಕಾನೂನು ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.
ದಿನಾಂಕ 11-07-2025ರಂದೇ ಕೋರ್ಟ್ ಮಹತ್ವದ ಆದೇಶ
ಸಾಗರದ ಮಾರಿಕಾಂಬ ದೇವಸ್ಥಾನಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಾತಿ ಸೇರಿದಂತೆ ವಿವಿಧ ವಿಷಯಗಳನ್ನು ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಮಂಜುನಾಥ ನಾಯಕ್ ಅವರು 11-07-2025ರಂದು ತೀರ್ಪು ಪ್ರಕಟಿಸಿದ್ದರು.
ಶಿವಮೊಗ್ಗ ಜಿಲ್ಲಾ ಪ್ರದಾನ ಮತ್ತು ಸತ್ರ ನ್ಯಾಯಾಲಯ ನೀಡಿದ್ದಂತ ತೀರ್ಪಿನಲ್ಲಿ ಈ ತೀರ್ಪು ಪ್ರಕಟಗೊಂಡ ದಿನಾಂಕದಿಂದ 3 ತಿಂಗಳ ಒಳಗಾಗಿ ಹೊಸ ಆಡಳಿತ ಸಮಿತಿಯನ್ನು ರಚಿಸಿ, ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಬೇಕು ಎಂದಿತ್ತು.
ಕೋರ್ಟ್ ಆದೇಶದ ನಂತ್ರ ಮಾರಿಕಾಂಬ ದೇವಸ್ಥಾನದ ಹಾಲಿ ಸಮಿತಿಯವರು ಸುದ್ದಿಗೋಷ್ಠಿ ನಡೆಸಿ ಕೋರ್ಟ್ ಆದೇಶ ಪಾಲಿಸುತ್ತೇವೆ. ನ್ಯಾಯಾಲಯ ನಿಗದಿ ಪಡಿಸಿರುವಂತ ದಿನಾಂಕದೊಳಗೆ ಚುನಾವಣೆ ನಡೆಸಿ, ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸುವುದಾಗಿ ತಿಳಿಸಿತ್ತು.
ಕೋರ್ಟ್ ಮೊರೆ ಹೋಗಿದ್ದಂತ ಮತ್ತೊಂದು ಗುಂಪು ಕೂಡ, ಹಾಲಿ ಸಮಿತಿಯವರು ನ್ಯಾಯಾಲಯದ ಆದೇಶದಂತೆ ಕಾರ್ಯಪ್ರವೃತ್ತರಾದರೇ ನಮ್ಮ ಅಭ್ಯಂತರವೇನು ಇಲ್ಲ. ಕೋರ್ಟ್ ಆದೇಶದಂತೆ ಶ್ರೀ ಮಾರಿಕಾಂಬ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ನಡೆಸುವ ಮೂಲಕ ನೂತನ ಸಮಿತಿ ರಚನೆಯಾಗಲಿ. ಅದಕ್ಕೆ ನಮ್ಮ ಸಹಕಾರವಿದೆ ಎಂಬುದಾಗಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿತ್ತು. ಅದರಂತೆಯೇ ಸಾಗರದ ಈಡಿಗರ ಭವನದಲ್ಲಿ ನಡೆದಂತ ಶ್ರೀ ಮಾರಿಕಾಂಬ ನ್ಯಾಸ ಪ್ರತಿಷ್ಠಾನದ ಸರ್ವ ಸದಸ್ಯರ ಮಹಾಸಭೆಯಲ್ಲಿ ಚುನಾವಣೆಗೆ ಒಮ್ಮತ ಒಪ್ಪಿಗೆಯನ್ನು ಸೂಚಿಸಿ, ಸಂಘದ ಇತರೆ ವಿವರದ ಬಗ್ಗೆ ಚಕಾರವೆತ್ತದೇ ಸಭೆಯನ್ನು ಅಂತ್ಯಗೊಳಿಸುವಂತಾಗಿತ್ತು.
ಕೋರ್ಟ್ ಆದೇಶದ ಬರೋಬ್ಬರಿ 71 ದಿನಗಳ ಬಳಿಕ ವಾರ್ಷಿಕ ಮಹಾಸಭೆ
ಇದಾದ ಬಳಿಕ ದಿನಾಂಕ 20-09-2025ರಂದು ಬರೋಬ್ಬರಿ ಕೋರ್ಟ್ ಆದೇಶದ 71 ದಿನಗಳ ಬಳಿಕ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಸರ್ವ ಸದಸ್ಯರ ಮಹಾಸಭೆಯನ್ನು ಕರೆಯಲಾಗಿತ್ತು. ಅಲ್ಲಿಯೂ ಪರ ವಿರೋಧದ ಬಗ್ಗೆ ಚರ್ಚೆ ನಡೆದು, ಅಂತಿಮವಾಗಿ ಚುನಾವಣೆಗೆ ಹೋಗುವಂತ ನಿರ್ಧಾರಕ್ಕೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದ್ದರು. ಯಾವುದೇ ಬೇರೆ ವಿಷಯಗಳನ್ನು ಮಹಾಸಭೆಯಲ್ಲಿ ಚರ್ಚಿಸೋದಕ್ಕೆ ಅವಕಾಶ ನೀಡದೇ, ನೇರವಾಗಿ ಚುನಾವಣೆ ನಿರ್ಧಾರವನ್ನು ಪ್ರಕಟಿಸೋದಕ್ಕೆ ಅವಕಾಶ ನೀಡಲಾಗಿತ್ತು.
ಈ ಮಹಾಸಭೆಯಲ್ಲಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಗಿರಿಧರ ಭಟ್ ಅವರು, ಚುನಾವಣೆಗೆ ಹೋಗುವುದಾಗಿ ಘೋಷಿಸಿದ್ದರು. ಅಲ್ಲದೇ ನಾಳೆಯೇ ಜಿಲ್ಲಾ ನೋಂದಣಾಧಿಕಾರಿಯನ್ನು ಭೇಟಿಯಾಗಿ ಚುನಾವಣೆಯನ್ನು ಘೋಷಿಸುವಂತೆ ಸಭೆಯ ನಿರ್ಣಯದ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ್ದರು.
ಆದರೇ ಮರು ದಿನವೇ ನೀಡುವುದಾಗಿ ಘೋಷಿಸಿದ್ದಂತ ಅವರು ಮಹಾಸಭೆ ನಡೆದ ಮೂರು ದಿನಗಳ ಬಳಿಕ ಜಿಲ್ಲಾ ನೋಂದಣಾಧಿಕಾರಿಗಳಿಗೆ ಚುನಾವಣೆ ಘೋಷಣೆಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕೋರ್ಟ್ ಆದೇಶ ಮಾಡಿದಂತ ಒಂದೂವರೆ ಅಥವಾ ಎರಡು ತಿಂಗಳ ಒಳಗಾಗಿ ಚುನಾವಣೆಗೆ ದಿನಾಂಕ ಪ್ರಕಟಿಸುವಂತ ಕೆಲಸವನ್ನು ಮಾಡಬೇಕಿತ್ತು ಎಂದು ಹೇಳಲಾಗುತ್ತಿದೆ.
ಇದರ ಮಧ್ಯೆ ನಡೆದಿದ್ದೇನು?
ಶ್ರೀ ಮಾರಿಕಾಂಬ ನ್ಯಾಸ ಪ್ರತಿಷ್ಠಾನದ ಹಾಲಿ ಸದಸ್ಯರು ಕೋರ್ಟ್ ಸೂಚನೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದೇ ಆದರೇ, ಇಂದಿಗೆ ನೂತನ ಆಡಳಿತ ಮಂಡಳಿಯ ಸಮಿತಿ ಅಸ್ಥಿತ್ವಕ್ಕೆ ಬರಬೇಕಿತ್ತು. ಇಲ್ಲಿ ಹಾಗೆ ಆಗಿಲ್ಲ ಎಂಬುದು ಹಲವರ ಮಾತಾಗಿದೆ.
ಕೋರ್ಟ್ ಆದೇಶದ ನಂತ್ರ ನೂತನ ಸಮಿತಿ ರಚಿಸೋ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದ್ದಂತ ಹಾಲಿ ಸಮಿತಿಯು, ಮಹಾಸಭೆ ಬಳಿಕ 2026ನೇ ಸಾಲಿನ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದ ದಿನಾಂಕ ನಿಗದಿ, ಘೋಷಣೆಯ ಕೆಲಸದಲ್ಲಿ ನಿರತರಾಗಿ, ಕಾಲಹರಣ ಮಾಡಲಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಇಲ್ಲದೇ ಇದ್ದರೇ ಈ ವೇಳೆಗೆ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ನೂತನ ಪದಾಧಿಕಾರಿಗಳು ಗದ್ದುಗೆಗೇರುತ್ತಿದ್ದರು ಎನ್ನಲಾಗಿದೆ.
ಹಾಲಿ ಸದಸ್ಯರಿಗೆ ನ್ಯಾಯಾಂಗ ನಿಂದನೆಯ ಕಾನೂನು ಸಂಕಷ್ಟ?
ಶ್ರೀ ಮಾರಿಕಾಂಬ ದೇವಿ ನ್ಯಾಯ ಪ್ರತಿಷ್ಠಾನದಲ್ಲಿ 36 ಮಂದಿ ಸಮಿತಿಯ ಸದಸ್ಯರಿದ್ದಾರೆ. ಕೋರ್ಟ್ ಸೂಚನೆಯ ಬಳಿಕ ತ್ವರಿತವಾಗಬೇಕಿದ್ದಂತ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆಯೇ ಇಲ್ಲಿ ಆಗಿಲ್ಲ ಎಂಬುದು ಕಾನೂನು ಬಲ್ಲವರ ಮಾತು.
ದಿನಾಂಕ 10-10-2025ಕ್ಕೆ ಕೋರ್ಟ್ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಯ ಪ್ರಕ್ರಿಯೆ ಮುಕ್ತಾಯಗೊಳಿಸುವಂತೆ ಗಡುವು ನಿಗದಿ ಪಡಿಸಿತ್ತು. ಇದಾದ ಬಳಿಕ ಸರ್ವ ಸದಸ್ಯರ ಮಹಾಸಭೆಯನ್ನು ಕೋರ್ಟ್ ಆದೇಶದ ಬೆನ್ನಲ್ಲೇ ಕರೆದು, ಆ ಪ್ರಕ್ರಿಯೆಗೆ ಚುರುಕುಗೊಳಿಸಬೇಕಾಗಿದ್ದು ಹಾಲಿ ಸಮಿತಿಯ ಕರ್ತವ್ಯವಾಗಿತ್ತು. ಆದರೇ ಅದು ಇಲ್ಲಿ ಪಾಲನೆಯೇ ಆಗಿಲ್ಲವೆನ್ನುವುದಕ್ಕೆ ದಿನಾಂಕ 20-09-2025ರಂದು ಮಹಾಸಭೆಯನ್ನು ಕೋರ್ಟ್ ಆದೇಶದ ಬರೋಬ್ಬರಿ 71 ದಿನಗಳ ಬಳಿಕ ಕರೆದಿದ್ದೇ ನಿದರ್ಶನವಾಗಿದೆ.
ದಿನಾಂಕ 11-07-2025ರಂದು ಕೋರ್ಟ್ ಆದೇಶ ಮಾಡಿದ್ದರೇ ಜುಲೈನಲ್ಲಿಯೇ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಸರ್ವ ಸದಸ್ಯರ ಮಹಾಸಭೆ ಕರೆದು, ಕೋರ್ಟ್ ಸೂಚನೆಯಂತೆ ಸಭೆಯಲ್ಲಿ ಚುನಾವಣೆ ನಿರ್ಧಾರ ಕೈಗೊಂಡು, ಜೂನ್ ನಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಕಾರ್ಯರೂಪಕ್ಕೆ ತಂದು, ಆಗಸ್ಟ್ ನಲ್ಲಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸುವಂತ ಕಾರ್ಯವಾಗಬೇಕಿತ್ತು. ಆದರೇ ಇಲ್ಲಿ ಅದ್ಯಾವುದೂ ಪಾಲನೆಯಾಗಿಲ್ಲ ಎಂಬುದು ಹಲವರ ಆರೋಪವಾಗಿದೆ.
ಈ ಎಲ್ಲಾ ಕಾರಣದಿಂದಾಗಿ ಶಿವಮೊಗ್ಗ ಜಿಲ್ಲಾ ಪ್ರದಾನ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತೆ ಆಗಿದ್ದು, ಹಾಲಿ ಎಲ್ಲಾ ಸದಸ್ಯರಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನುವುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ಹಾಲಿ ಸಮಿತಿಯವರ ಆಲೋಚನೆ ಏನು?
ಬಲ್ಲ ಮೂಲಗಳ ಮಾಹಿತಿಯಂತೆ ಹಾಲಿ ಸಮಿತಿಯವರು ಕೋರ್ಟ್ ಆದೇಶವನ್ನು ಕಾರ್ಯರೂಪಕ್ಕೆ ತಂದಿದ್ದೇವೆ ಎನ್ನುತ್ತಲೇ 2026ನೇ ಸಾಲಿನ ಶ್ರೀ ಮಾರಿಕಾಂಬ ದೇವಿ ಜಾತ್ರೆಯನ್ನು ಮುಗಿಸೋ ಆಲೋಚನೆಯಲ್ಲಿದೆ ಎನ್ನಲಾಗುತ್ತಿದೆ. ಮುಂಬರುವಂತ ಸಾಗರದ ಮಾರಿಕಾಂಬ ದೇವಿಯ ಜಾತ್ರೆಯನ್ನು ಮುಕ್ತಾಯಗೊಳಿಸಿ, ಆ ನಂತ್ರ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸೋ ಯೋಚನೆಯಲ್ಲಿದೆ ಎನ್ನಲಾಗುತ್ತಿದೆ.
ಅದೇನೇ ಆದರೂ ಸಾಗರದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ ಕೋರ್ಟ್ ಸೂಚನೆಯಂತೆ ಅಸ್ಥಿತ್ವಕ್ಕೆ ಬಂದ ಬಳಿಕ, ದಿನಾಂಕ 10-10-2025ರ ನಿನ್ನೆಗೆ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸುವ ಕೆಲಸವಾಗಬೇಕಿತ್ತು. ಅದು ಇಲ್ಲಿ ಆಗದಿರುವುದು ಈಗ ಕೋರ್ಟ್ ಆದೇಶವನ್ನು ಉಲ್ಲಂಘಿಸಿದಂತೆ ಆಗಿದ್ದು, ನ್ಯಾಯಾಂಗ ನಿಂದನೆಯ ಕಾನೂನು ಸಂಕಷ್ಟ ಎದುರಾದಂತೆ ಆಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ
‘ACF, RFO, DRF ನೇಮಕಾತಿ’ಗೆ ‘ಬಿಎಸ್ಸಿ ಅರಣ್ಯಶಾಸ್ತ್ರ ಪದವಿ’ ಕಡ್ಡಾಯಗೊಳಿಸಿ: ವಿದ್ಯಾರ್ಥಿಗಳ ಒತ್ತಾಯ