ದುಬೈ:ವಿಶ್ವದ ಅತಿ ಸುರಕ್ಷಿತ ನಗರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ದುಬೈನಲ್ಲಿ ಈಗ ಯುದ್ಧದ ಕಿಡಿ ಕಾಣಿಸಿಕೊಂಡಿದೆ. ದುಬೈ ಇಂಟರ್ನೆಟ್ ಸಿಟಿಯಲ್ಲಿರುವ (Dubai Internet City) ಖ್ಯಾತ ತಂತ್ರಜ್ಞಾನ ಸಂಸ್ಥೆ ‘ಒರಾಕಲ್’ (Oracle) ಕಟ್ಟಡವನ್ನು ಗುರಿಯಾಗಿಸಿಕೊಂಡು ಇರಾನ್‌ನಿಂದ ಉಡಾಯಿಸಲಾದ ಕ್ಷಿಪಣಿಗಳು ಅಥವಾ ಪ್ರೊಜೆಕ್ಟೈಲ್ಸ್‌ಗಳು ದಾಳಿ ನಡೆಸಲು ಯತ್ನಿಸಿವೆ. ಆದರೆ, ಯುಎಇ (UAE) ಸೇನೆಯು ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯ ಮೂಲಕ ಇವುಗಳನ್ನು ಆಕಾಶದಲ್ಲೇ ಯಶಸ್ವಿಯಾಗಿ ತಡೆದಿದೆ (Intercepted).
ದುಬೈನ ಪ್ರತಿಷ್ಠಿತ ಇಂಟರ್ನೆಟ್ ಸಿಟಿಯಲ್ಲಿರುವ ಅಮೆರಿಕ ಮೂಲದ ಐಟಿ ಸಂಸ್ಥೆ ‘ಒರಾಕಲ್’ನ ಕಚೇರಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು. ಇದು ಅಂತರಾಷ್ಟ್ರೀಯ ತಾಂತ್ರಿಕ ವಲಯದಲ್ಲಿ ಭಾರಿ ಆತಂಕ ಮೂಡಿಸಿದೆ.ಇರಾನ್ ಕಡೆಯಿಂದ ಬಂದ ಕ್ಷಿಪಣಿಗಳು ಗುರಿ ತಲುಪುವ ಮೊದಲೇ ದುಬೈ ವಾಯುಪಡೆಯು ಅವುಗಳನ್ನು ಗುರುತಿಸಿ ನಾಶಪಡಿಸಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ವರದಿಯಾಗಿಲ್ಲ.
ದಾಳಿಯ ಬೆನ್ನಲ್ಲೇ ದುಬೈ ಇಂಟರ್ನೆಟ್ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಾವಿರಾರು ಐಟಿ ಉದ್ಯೋಗಿಗಳು ಈ ಘಟನೆಯಿಂದ ಭಯಭೀತರಾಗಿದ್ದಾರೆ.








