ಗಾಲೆ (ಶ್ರೀಲಂಕಾ)/ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷ ಈಗ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಿದೆ. ಭಾರತದ ವಿಶಾಖಪಟ್ಟಣಂನಲ್ಲಿ ನಡೆದ ‘ಮಿಲನ್-2026’ ನೌಕಪಡೆಯ ಸಮರಾಭ್ಯಾಸ ಮುಗಿಸಿ ವಾಪಸ್ಸಾಗುತ್ತಿದ್ದ ಇರಾನ್ನ ಅತ್ಯಾಧುನಿಕ ಯುದ್ಧನೌಕೆ ‘ಐರಿಸ್ ದೆನಾ’ (IRIS Dena) ವನ್ನು ಅಮೆರಿಕದ ಜಲಂತರ್ಗಿಾ (Submarine) ಟಾರ್ಪಿಡೊ ದಾಳಿ ಮೂಲಕ ಮುಳುಗಿಸಿದೆ. ಈ ಘಟನೆಯಲ್ಲಿ 87 ಇರಾನ್ ನಾವಿಕರು ಮೃತಪಟ್ಟಿದ್ದು, ಸಂಘರ್ಷದ ತೀವ್ರತೆ ಭಾರತದ ಗಡಿಭಾಗದವರೆಗೂ ತಲುಪಿದೆ.
ಘಟನೆಯ ಪ್ರಮುಖ ವಿವರಗಳು:
ದಾಳಿ ನಡೆದ ಸ್ಥಳ: ಶ್ರೀಲಂಕಾದ ಗಾಲೆ ಕರಾವಳಿಯಿಂದ ಸುಮಾರು 40 ನಾಟಿಕಲ್ ಮೈಲಿ ದೂರದಲ್ಲಿ, ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಈ ದಾಳಿ ನಡೆದಿದೆ.
ಅಮೆರಿಕದ ಒಪ್ಪಿಗೆ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ದಾಳಿಯನ್ನು ಖಚಿತಪಡಿಸಿದ್ದಾರೆ. “ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ತಾನು ಸುರಕ್ಷಿತವೆಂದು ಭಾವಿಸಿದ್ದ ಇರಾನ್ ನೌಕೆಯನ್ನು ಅಮೆರಿಕದ ಜಲಂತರ್ಗಿಾ ಟಾರ್ಪಿಡೊ ಮೂಲಕ ಹೊಡೆದುರುಳಿಸಿದೆ” ಎಂದು ಅವರು ತಿಳಿಸಿದ್ದಾರೆ.
ಐತಿಹಾಸಿಕ ದಾಳಿ: ಎರಡನೇ ಮಹಾಯುದ್ಧದ ನಂತರ ಶತ್ರು ರಾಷ್ಟ್ರದ ಯುದ್ಧನೌಕೆಯನ್ನು ಅಮೆರಿಕ ಟಾರ್ಪಿಡೊ ಬಳಸಿ ಮುಳುಗಿಸಿದ ಮೊದಲ ಘಟನೆ ಇದಾಗಿದೆ ಎಂದು ಪೆಂಟಗನ್ ಹೇಳಿದೆ.
ಭಾರತದ ನಂಟು: ಮುಳುಗಡೆಯಾದ ನೌಕೆಯು ಕಳೆದ ವಾರವಷ್ಟೇ ವಿಶಾಖಪಟ್ಟಣಂನಲ್ಲಿ ಭಾರತ ಆಯೋಜಿಸಿದ್ದ MILAN-2026 ಸಮರಾಭ್ಯಾಸದಲ್ಲಿ ಭಾಗವಹಿಸಿತ್ತು. ಅಲ್ಲಿಂದ ವಾಪಸ್ಸಾಗುವ ದಾರಿಯಲ್ಲಿ ಈ ದಾಳಿ ನಡೆದಿದೆ.
ಹಾನಿ ಮತ್ತು ರಕ್ಷಣಾ ಕಾರ್ಯಾಚರಣೆ:
ಸಾವಿನ ಸಂಖ್ಯೆ: ಹಡಗಿನಲ್ಲಿದ್ದ ಒಟ್ಟು 180 ಸಿಬ್ಬಂದಿಗಳ ಪೈಕಿ 87 ಮಂದಿ ಸಾವನ್ನಪ್ಪಿದ್ದಾರೆ ಎಂದು ಶ್ರೀಲಂಕಾ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ರಕ್ಷಣೆ: ಶ್ರೀಲಂಕಾ ನೌಕಾಪಡೆ ಮತ್ತು ವಾಯುಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 32 ನಾವಿಕರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದ್ದು, ಅವರನ್ನು ಗಾಲೆಯ ಕಾರಾಪಿಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸುಮಾರು 60 ಮಂದಿ ನಾಪತ್ತೆಯಾಗಿದ್ದಾರೆ.
ತೈಲ ಸೋರಿಕೆ: ಹಡಗು ಮುಳುಗಿದ ಜಾಗದಲ್ಲಿ ಭಾರಿ ಪ್ರಮಾಣದ ತೈಲ ಸೋರಿಕೆಯಾಗಿದ್ದು (Oil Slick), ಪರಿಸರಕ್ಕೆ ಹಾನಿಯಾಗುವ ಭೀತಿ ಎದುರಾಗಿದೆ.
ಭಾರತದ ಮೇಲೆ ಬೀರುವ ಪರಿಣಾಮ:
ಯುದ್ಧವು ಪಶ್ಚಿಮ ಏಷ್ಯಾದಿಂದ ಹಿಂದೂ ಮಹಾಸಾಗರಕ್ಕೆ ವಿಸ್ತರಿಸಿರುವುದು ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಮುದ್ರ ಮಾರ್ಗದ ಭದ್ರತೆ: ಭಾರತದ ಆರ್ಥಿಕ ವಲಯದ (EEZ) ಹತ್ತಿರವೇ ಈ ದಾಳಿ ನಡೆದಿರುವುದು ಸಮುದ್ರ ಮಾರ್ಗದ ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ.
ರಾಜತಾಂತ್ರಿಕ ಸಂಕಷ್ಟ: ಭಾರತದ ಆಹ್ವಾನದ ಮೇರೆಗೆ ಬಂದಿದ್ದ ಅತಿಥಿ ನೌಕೆಯ ಮೇಲೆ ದಾಳಿ ನಡೆದಿರುವುದು ಮತ್ತು ಈ ಭಾಗದಲ್ಲಿ ಅಮೆರಿಕದ ಜಲಂತರ್ಗಿಾಗಳ ಸಂಚಾರ ಹೆಚ್ಚಿರುವುದು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಪ್ರಭಾವಕ್ಕೆ ಸವಾಲಾಗಿ ಪರಿಣಮಿಸಿದೆ.








