ತೆಹ್ರಾನ್: ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿರುವ ಇರಾನ್, ಈಗ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಸಂಖ್ಯೆಯ ಮೇಲೆ ನಿರ್ಬಂಧ ಹೇರಿರುವ ಇರಾನ್ ಸರ್ಕಾರ, ಯಾವ ಹಡಗುಗಳು ಸುರಕ್ಷತೆ ಮತ್ತು ಭದ್ರತಾ ಸೇವೆಗಳಿಗಾಗಿ ಶುಲ್ಕವನ್ನು ಪಾವತಿಸುತ್ತವೆಯೋ ಅವುಗಳಿಗೆ ಮಾತ್ರ ಸಂಚಾರದಲ್ಲಿ ಮೊದಲ ಆದ್ಯತೆ ನೀಡುವುದಾಗಿ ಘೋಷಿಸಿದೆ.
ಇರಾನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಂತೆ, “ಹೊಸ ಶಿಷ್ಟಾಚಾರಗಳಿಗೆ (Protocols) ವೇಗವಾಗಿ ಸ್ಪಂದಿಸುವ ಮತ್ತು ನಿಗದಿಪಡಿಸಿದ ವೆಚ್ಚವನ್ನು ಭರಿಸುವ ಹಡಗುಗಳಿಗೆ ಆದ್ಯತೆ ನೀಡಲಾಗುವುದು. ಹಣ ಪಾವತಿಸದ ಹಡಗುಗಳ ಸಂಚಾರವನ್ನು ಮುಂದೂಡಲಾಗುವುದು (Postponed),” ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕವು ಇರಾನ್ ಬಂದರುಗಳ ಮೇಲೆ ವಿಧಿಸಿರುವ ನೌಕಾ ದಿಗ್ಬಂಧನ ಮತ್ತು ಕದನ ವಿರಾಮ ಒಪ್ಪಂದದ ಉಲ್ಲಂಘನೆಯನ್ನು ಮುಂದಿಟ್ಟುಕೊಂಡು ಇರಾನ್ ಈ ಕ್ರಮ ಕೈಗೊಂಡಿದೆ. ಜಲಸಂಧಿಯ ಮೇಲಿನ ತನ್ನ ಸಾರ್ವಭೌಮತ್ವವನ್ನು ಸಾಬೀತುಪಡಿಸಲು ಮತ್ತು ಯುದ್ಧದ ವೆಚ್ಚವನ್ನು ಸರಿದೂಗಿಸಲು ಈ ‘ಸಾರಿಗೆ ಶುಲ್ಕ’ (Transit Fees) ವಿಧಿಸುತ್ತಿರುವುದಾಗಿ ಇರಾನ್ ಸಂಸದರು ಈ ಹಿಂದೆ ತಿಳಿಸಿದ್ದರು.
ಮೂಲಗಳ ಪ್ರಕಾರ, ಕೆಲವು ಹಡಗುಗಳಿಗೆ ಸುಮಾರು 2 ಮಿಲಿಯನ್ ಡಾಲರ್ (ಸುಮಾರು 16 ಕೋಟಿ ರೂ.) ವರೆಗೂ ಶುಲ್ಕ ವಿಧಿಸಲಾಗುತ್ತಿದೆ ಎನ್ನಲಾಗಿದೆ. ಇದನ್ನು ‘ಭದ್ರತಾ ವೆಚ್ಚ’ ಅಥವಾ ‘ಯುದ್ಧ ಪರಿಹಾರ’ ಎಂದು ಇರಾನ್ ಕರೆಯುತ್ತಿದೆ.







