ಟೆಹ್ರಾನ್:ದೀರ್ಘಕಾಲದ ಉದ್ವಿಗ್ನತೆಯ ನಡುವೆಯೇ ಇರಾನ್ ಸರ್ಕಾರವು ಅಮೆರಿಕದೊಂದಿಗೆ ಮಾತುಕತೆ ನಡೆಸಲು ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ವಿಶೇಷವೆಂದರೆ, ಈ ಬಾರಿ ಇರಾನ್ ತನ್ನ ನೆರೆಯ ರಾಷ್ಟ್ರವಾದ ಪಾಕಿಸ್ತಾನವನ್ನು ಸಂಧಾನದ ಕೊಂಡಿಯಾಗಿ ಬಳಸಿಕೊಂಡಿದೆ.
ಅಮೆರಿಕ ಮತ್ತು ಇರಾನ್ ನಡುವೆ ನೇರ ರಾಜತಾಂತ್ರಿಕ ಸಂಬಂಧವಿಲ್ಲದ ಕಾರಣ, ಇರಾನ್ ತನ್ನ ಹೊಸ ಪ್ರಸ್ತಾವನೆಯನ್ನು ಪಾಕಿಸ್ತಾನದ ಮೂಲಕ ವಾಷಿಂಗ್ಟನ್‌ಗೆ ತಲುಪಿಸಿದೆ.
ಈ ಪ್ರಸ್ತಾವನೆಯು ಸದ್ಯ ಜಾರಿಯಲ್ಲಿರುವ ಕದನ ವಿರಾಮವನ್ನು ಶಾಶ್ವತಗೊಳಿಸುವುದು, ಆರ್ಥಿಕ ನಿರ್ಬಂಧಗಳ ಸಡಿಲಿಕೆ ಮತ್ತು ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಇರಾನ್‌ನ ಈ ಪ್ರಸ್ತಾವನೆಗೆ ಅಮೆರಿಕದ ಶ್ವೇತಭವನ ಅಥವಾ ರಕ್ಷಣಾ ಇಲಾಖೆಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೂ, ಸಂಧಾನದ ಈ ಹೊಸ ಹಾದಿ ಜಾಗತಿಕ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.








