ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಐದು ದಿನಗಳ ಕಾಲ ಇರಾನ್ ಮೇಲಿನ ದಾಳಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಇರಾನ್ ಸರ್ಕಾರವು ಯುದ್ಧವನ್ನು ಸಂಪೂರ್ಣವಾಗಿ ಕೊನೆಗಾಣಿಸಲು ತನ್ನದೇ ಆದ ಕಠಿಣ ಷರತ್ತುಗಳನ್ನು ಜಗತ್ತಿನ ಮುಂದಿಟ್ಟಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಅಸ್ತಿತ್ವವನ್ನೇ ಅಳಿಸಿಹಾಕುವುದಾಗಿ ಇರಾನ್ ಎಚ್ಚರಿಸಿದೆ.
ಹಾರ್ಮುಜ್ ಜಲಸಂಧಿಯ ಮೇಲೆ ಪೂರ್ಣ ನಿಯಂತ್ರಣ ಮತ್ತು ಮಧ್ಯಪ್ರಾಚ್ಯದಿಂದ ಅಮೆರಿಕ ಸೇನೆಯ ನಿರ್ಗಮನ ಇರಾನ್ನ ಪ್ರಮುಖ ಬೇಡಿಕೆಗಳಾಗಿವೆ.
ಇರಾನ್ ವಿಧಿಸಿರುವ ಪ್ರಮುಖ ಷರತ್ತುಗಳು ಇಂತಿವೆ:
ಅಮೆರಿಕ ಸೇನಾ ನೆಲೆಗಳ ಮುಚ್ಚುವಿಕೆ: ಇರಾನ್ನ ಗಡಿಯ ಸುತ್ತಮುತ್ತಲಿರುವ ಮತ್ತು ಮಧ್ಯಪ್ರಾಚ್ಯದ ವಿವಿಧ ದೇಶಗಳಲ್ಲಿರುವ ಎಲ್ಲಾ ಅಮೆರಿಕದ ಸೇನಾ ನೆಲೆಗಳನ್ನು ತಕ್ಷಣವೇ ತೆರವುಗೊಳಿಸಬೇಕು.
ಹಾರ್ಮುಜ್ ಜಲಸಂಧಿಯ ನಿಯಂತ್ರಣ: ಜಾಗತಿಕ ತೈಲ ಪೂರೈಕೆಯ ನಾಳವಾಗಿರುವ ‘ಹಾರ್ಮುಜ್ ಜಲಸಂಧಿ’ಯ (Strait of Hormuz) ಸಂಪೂರ್ಣ ಭದ್ರತೆ ಮತ್ತು ನಿಯಂತ್ರಣದ ಹಕ್ಕನ್ನು ಇರಾನ್ಗೆ ಬಿಟ್ಟುಕೊಡಬೇಕು. ಅಂತರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ ಕಡ್ಡಾಯವಾಗಬೇಕು.
ಇಸ್ರೇಲ್ಗೆ ಬೆಂಬಲ ಸ್ಥಗಿತ: ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ಅಮೆರಿಕ ತಕ್ಷಣವೇ ನಿಲ್ಲಿಸಬೇಕು ಮತ್ತು ಇಸ್ರೇಲ್ಗೆ ನೀಡುತ್ತಿರುವ ಎಲ್ಲಾ ಮಿಲಿಟರಿ ನೆರವನ್ನು ರದ್ದುಗೊಳಿಸಬೇಕು.
ಆರ್ಥಿಕ ನಿರ್ಬಂಧಗಳ ತೆರವು: ಇರಾನ್ ಮೇಲಿರುವ ಎಲ್ಲಾ ಅಂತರಾಷ್ಟ್ರೀಯ ಆರ್ಥಿಕ ನಿರ್ಬಂಧಗಳನ್ನು (Sanctions) ಬೇಷರತ್ತಾಗಿ ಹಿಂಪಡೆಯಬೇಕು ಮತ್ತು ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಇರಾನ್ಗೆ ಮುಕ್ತ ಪ್ರವೇಶ ನೀಡಬೇಕು.








