ಟೆಹ್ರಾನ್/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿಟ್ಟಿರುವ ’15 ಅಂಶಗಳ ಶಾಂತಿ ಯೋಜನೆ’ಗೆ ಇರಾನ್ ಈಗ ತನ್ನದೇ ಆದ ಕಠಿಣ ಷರತ್ತುಗಳನ್ನು ವಿಧಿಸಿದೆ. ಪಶ್ಚಿಮ ಏಷ್ಯಾದಲ್ಲಿ ಕದನ ವಿರಾಮ ಏರ್ಪಡಬೇಕಾದರೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಎಲ್ಲಾ ಸೇನಾ ನೆಲೆಗಳನ್ನು ಮುಚ್ಚಬೇಕು ಎಂಬುದು ಇರಾನ್ನ ಪ್ರಮುಖ ಬೇಡಿಕೆಯಾಗಿದೆ.
ಪರ್ಷಿಯನ್ ಗಲ್ಫ್ ಮತ್ತು ಸುತ್ತಮುತ್ತಲಿನ ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. “ವಿದೇಶಿ ಪಡೆಗಳ ಉಪಸ್ಥಿತಿಯೇ ಈ ಭಾಗದ ಅಸ್ಥಿರತೆಗೆ ಕಾರಣ” ಎಂದು ಇರಾನ್ ವಾದಿಸಿದೆ.
ಅಮೆರಿಕವು ಇರಾನ್ ಮೇಲೆ ಹೇರಿರುವ ಎಲ್ಲಾ ಆರ್ಥಿಕ ಮತ್ತು ವ್ಯಾಪಾರ ನಿರ್ಬಂಧಗಳನ್ನು ತಕ್ಷಣವೇ ಹಿಂಪಡೆಯಬೇಕು. ವಿಶೇಷವಾಗಿ ತೈಲ ರಫ್ತು ಮತ್ತು ಬ್ಯಾಂಕಿಂಗ್ ವ್ಯವಹಾರಗಳಿಗೆ ಮುಕ್ತ ಅವಕಾಶ ನೀಡಬೇಕು.
ಇತ್ತೀಚಿನ ವೈಮಾನಿಕ ದಾಳಿಗಳಿಂದ ಇರಾನ್ನ ಮೂಲಸೌಕರ್ಯ ಮತ್ತು ಸೇನಾ ನೆಲೆಗಳಿಗೆ ಉಂಟಾಗಿರುವ ಹಾನಿಗೆ ಅಮೆರಿಕವು ಭಾರಿ ಮೊತ್ತದ ನಷ್ಟ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನೂ ಇರಾನ್ ಇಟ್ಟಿದೆ ಎನ್ನಲಾಗಿದೆ.
ಶಾಂತಿಯುತ ಉದ್ದೇಶಗಳಿಗಾಗಿ ಯುರೇನಿಯಂ ಪುಷ್ಟೀಕರಣ ಮಾಡುವ ತನ್ನ ಹಕ್ಕನ್ನು ಅಂತರಾಷ್ಟ್ರೀಯ ಸಮುದಾಯ ಮಾನ್ಯ ಮಾಡಬೇಕು ಎಂದು ಇರಾನ್ ಆಗ್ರಹಿಸಿದೆ.








