ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧ ಹಾಗೂ ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ಇರಾನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ದೇಶಾದ್ಯಂತ ಕೈಗಾರಿಕೆಗಳು ಮತ್ತು ಐಟಿ ಕಂಪನಿಗಳು ಬಾಗಿಲು ಮುಚ್ಚುತ್ತಿದ್ದು, ಲಕ್ಷಾಂತರ ಕಾರ್ಮಿಕರು ಬೀದಿಗೆ ಬೀಳುವ ಭೀತಿ ಎದುರಾಗಿದೆ.
ಇರಾನ್‌ನ ಕೈಗಾರಿಕಾ ವಲಯವೊಂದರಲ್ಲೇ ಸುಮಾರು 35 ಲಕ್ಷ ಉದ್ಯೋಗಗಳು ಅಪಾಯದಲ್ಲಿವೆ ಎಂದು ಉದ್ಯಮದ ಮುಖಂಡರು ಎಚ್ಚರಿಸಿದ್ದಾರೆ. ಈಗಾಗಲೇ ಟೆಕ್ಸ್ ಟೈಲ್ ಮತ್ತು ಸ್ಟೀಲ್ ಕಾರ್ಖಾನೆಗಳಲ್ಲಿ ನೂರಾರು ಕಾರ್ಮಿಕರನ್ನು ಮನೆಗೆ ಕಳುಹಿಸಲಾಗಿದೆ.
ಕಳೆದ 70 ದಿನಗಳಿಂದ ಇರಾನ್ ಸರ್ಕಾರ ಇಂಟರ್ನೆಟ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದರಿಂದಾಗಿ ಡಿಜಿಟಲ್ ಆರ್ಥಿಕತೆಗೆ ಪ್ರತಿದಿನ ಅಂದಾಜು 80 ಮಿಲಿಯನ್ ಡಾಲರ್ (ಸುಮಾರು 670 ಕೋಟಿ ರೂ.) ನಷ್ಟವಾಗುತ್ತಿದೆ. ಡಿಜಿಕಾಲಾ (Digikala) ದಂತಹ ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳೂ ಉದ್ಯೋಗ ಕಡಿತದ ಹಾದಿ ಹಿಡಿದಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಬಂದರುಗಳಿಗೆ ದಿಗ್ಬಂಧನ ಹೇರಿದ್ದಾರೆ. ಇದರಿಂದ ತೈಲ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಇರಾನ್ ಸರ್ಕಾರದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಬೆಲೆ ಏರಿಕೆ: ಕೇವಲ 40 ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಶೇ. 200 ರಷ್ಟು ಏರಿಕೆಯಾಗಿದೆ.
ಜೀವನೋಪಾಯಕ್ಕಾಗಿ ಹೋರಾಟ: ಕೆಲಸ ಕಳೆದುಕೊಂಡ ಅನೇಕ ಇರಾನಿಯನ್ನರು ತಮ್ಮ ದೈನಂದಿನ ಜೀವನಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣ ಮತ್ತು ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.








