ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ದಿನೇ ದಿನೇ ಹೆಚ್ಚುತ್ತಿದ್ದು, ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ನ ವಿಶ್ವವಿದ್ಯಾಲಯಗಳು ಮತ್ತು ವೈಜ್ಞಾನಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿವೆ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಈ ದಾಳಿಗಳಿಗೆ ಪ್ರತಿಯಾಗಿ ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕ ಮತ್ತು ಇಸ್ರೇಲಿ ವಿಶ್ವವಿದ್ಯಾಲಯಗಳ ಮೇಲೆ ಪ್ರತಿದಾಳಿ ನಡೆಸುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಎಚ್ಚರಿಸಿದೆ.
ಇತ್ತೀಚಿನ ದಾಳಿಗಳಲ್ಲಿ ‘ಟೆಹ್ರಾನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ’ (IUST) ಹಾಗೂ ‘ಇಸ್ಫಹಾನ್ ತಾಂತ್ರಿಕ ವಿಶ್ವವಿದ್ಯಾಲಯ’ಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
“ದೇಶದ ವೈಜ್ಞಾನಿಕ ಅಡಿಪಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಧ್ವಂಸಗೊಳಿಸುವುದು ಅಮೆರಿಕ-ಇಸ್ರೇಲ್ ಮೈತ್ರಿಕೂಟದ ಮುಖ್ಯ ಉದ್ದೇಶವಾಗಿದೆ” ಎಂದು ಇರಾನ್ ವಕ್ತಾರ ಇಸ್ಮಾಯಿಲ್ ಬಘೈ ಕಿಡಿಕಾರಿದ್ದಾರೆ. ಅಮೆರಿಕ ಸರ್ಕಾರವು ಸೋಮವಾರ (ಮಾರ್ಚ್ 30) ಮಧ್ಯಾಹ್ನದೊಳಗೆ ಈ ದಾಳಿಗಳನ್ನು ಅಧಿಕೃತವಾಗಿ ಖಂಡಿಸದಿದ್ದರೆ, ಈ ಭಾಗದಲ್ಲಿರುವ ಅಮೆರಿಕ ಮತ್ತು ಇಸ್ರೇಲಿ ಶೈಕ್ಷಣಿಕ ಸಂಸ್ಥೆಗಳನ್ನು ನಾವು ‘ಸರಿಯಾದ ಗುರಿ’ (Legitimate Targets) ಎಂದು ಪರಿಗಣಿಸುತ್ತೇವೆ ಎಂದು ಇರಾನ್ ಸೇನೆ ಎಚ್ಚರಿಕೆ ನೀಡಿದೆ.
ಅಮೆರಿಕ ಮತ್ತು ಇಸ್ರೇಲಿ ವಿಶ್ವವಿದ್ಯಾಲಯಗಳ ಆವರಣದಿಂದ ಕನಿಷ್ಠ 1 ಕಿಲೋಮೀಟರ್ ದೂರವಿರುವಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಇರಾನ್ ಸೂಚನೆ ನೀಡಿದೆ.








