ವಿಧಾನಸಭೆ: ರಾಜ್ಯದಲ್ಲಿರುವ ಕುರಿಗಾಹಿಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದ 2025 ನೇ ಸಾಲಿನ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ವಿಧೇಯಕವನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಅವರು ಸ್ವಾಗತಿಸಿದ್ದಾರೆ.
ಗುರುವಾರ ವಿಧೇಯಕದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಕುರಿಗಾಹಿಗಳ ಪರವಾಗಿ ಮಂತ್ರಿಗಳು ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕುರಿಗಾಹಿಗಳೆಂದರೆ ಕೇವಲ ಕುರುಬರೇ ಅಲ್ಲ. ಒಂದು ಧರ್ಮಕ್ಕೆ, ಜಾತಿಗೆ ಸೀಮಿತವಾಗಿರದೇ ರಾಜ್ಯದ ಬಹುತೇಕ ಹಳ್ಳಿಗಳ ಎಲ್ಲಾ ಸಮುದಾಯಗಳಿಗೆ ಸೇರಿದ ಜನರು ಕುರಿಗಳನ್ನು ಸಾಕುತ್ತಿದ್ದಾರೆ. ಈ ಮೂಲಕ ಕುರಿ ಸಾಕಾಣಿಕೆ ಒಂದು ಉದ್ಯೋಗವಾಗಿದೆ. ಜೀವನ ಸಾಗಿಸಲು ಇದೊಂದು ಮಾರ್ಗವಾಗಿದೆ. ಕುರಿಗಾಹಿಗಳದ್ದು ಶತಮಾನಗಳಷ್ಟು ಹಳೆಯದಾದ ಸಂಪ್ರದಾಯವಾಗಿದೆ ಎಂದರು.
ರಾತ್ರೋರಾತ್ರಿ ಕುರಿಗಳನ್ನು ಕಳ್ಳತನ ಮಾಡುವ ಪ್ರಕರಣಗಳು ಜರುಗುತ್ತಿವೆ. ನಾಲ್ಕೈದು ತಿಂಗಳ ಹಿಂದೆ ಬಾಗಲಕೋಟೆಯಲ್ಲಿ ಕುರಿಗಾಹಿಯೊಬ್ಬರನ್ನು ಕೊಲೆ ಮಾಡಿ ಕುರಿಗಳನ್ನು ಕದ್ದೊಯ್ದ ಪ್ರಕರಣ ನಡೆದಿದೆ. ಇಂತಹ ಕುರಿಗಾಹಿಗಳಿಗೆ ಕಾನೂನಾತ್ಮಕವಾಗಿ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಕುರಿಗಾಹಿಗಳಿಗೆ ತೊಂದರೆ ನೀಡುವುದು, ಕಿರುಕುಳ ಮಾಡುವುದನ್ನು ತಪ್ಪಿಸಲು ಇಂತಹ ಕಾನೂನು ಅಗತ್ಯವಿತ್ತು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, ಕೊಡಗಿನ ಮಾದರಿಯಲ್ಲಿ ಸಾಂಪ್ರದಾಯಿಕ ಕುರಿಗಾಹಿಗಳಿಗೆ ಅರ್ಜಿ ಸಲ್ಲಿಸಿದ ತಕ್ಷಣ ಗನ್ ಪರವಾನಗಿ ನೀಡುವ ವ್ಯವಸ್ಥೆಯನ್ನೂ ಸರ್ಕಾರ ಮಾಡಬೇಕೆಂದು ಸಲಹೆ ನೀಡಿದರು.
ಪಾಕ್ ಜೊತೆ ದ್ವಿಪಕ್ಷೀಯತೆ ಇಲ್ಲ, ಆದರೆ ಕ್ರಿಕೆಟ್ ತಂಡ ಏಷ್ಯಾ ಕಪ್‌ನಲ್ಲಿ ಆಡಲು ಮುಕ್ತವಾಗಿದೆ: ಕ್ರೀಡಾ ಸಚಿವಾಲಯ