ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳಯಿಂದ ಮನೆಹಾನಿ, ಬೆಳೆನಷ್ಟ ಹಾಗೂ ಜೀವಹಾನಿ ಮುಂತಾದವುಗಳಿಂದ ಸಂತ್ರಸ್ತರಾದ ಕುಟುಂಬಗಳಿಗೆ ತಕ್ಷಣದ ಕ್ರಮವಾಗಿ ನಿಗಧಿಪಡಿಸಿದ ಪರಿಹಾರಧನ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ॥ ಕೆ.ಸಿ.ನಾರಾಯಣಗೌಡ ಅವರು ಹೇಳಿದರು.
ಅವರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ವಿವರ ನೀಡಿದರು.ಈವರೆಗೆ ಜಿಲ್ಲೆಯಲ್ಲಿ ಸುಮಾರು 246 ಮನೆಗಳು ಬಾಗಶಃ ಹಾಗೂ 26 ಮನೆಗಳು ಸಂಪೂರ್ಣ ಕುಸಿದಿರುವ ಬಗ್ಗೆ ಮಾಹಿತಿ ಇದೆ. ಅಲ್ಲದೆ ಒರ್ವ ವ್ಯಕ್ತಿ ಮರಣ ಹೊಂದಿರುವ ಬಗ್ಗೆಯೂ ಮಾಹಿತಿ ಪಡೆಕೊಳ್ಳಲಾಗಿದ್ದು, ಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಪರಿಹಾರಧನ ನೀಡುವಂತೆ ಸೂಚಿಸಲಾಗಿದ್ದು, ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಮಹಿಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಆಯಾ ತಾಲೂಕಿನ ಕಂದಾಯಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ತಕ್ಷಣದ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸುವಂತೆ ಸೂಚಿಸಿದರು. ಶಿವಮೊಗ್ಗ ನಗರದ ಶೇಷಾದ್ರಿಪುರಂ, ಬಾಪೂಜಿ ನಗರಗಳಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು ಸಂತ್ರಸ್ತರಿಗೆ ತಕ್ಷಣದ ಪರಿಹಾರಧನವನ್ನು ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ॥ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿ ಎಸ್.ಬಿ.ದೊಡ್ಡಗೌಡರ, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ತಹಶಿಲ್ದಾರ್ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.