ಬೆಂಗಳೂರು : ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿಯನ್ನು ಪಾರದರ್ಶಕವಾಗಿ ಸರಬರಾಜು ಮಾಡಲು ಹಾಗೂ ಕಾಳಸಂತೆಯಲ್ಲಿ ಅಕ್ಕಿ ಮಾರಾಟವನ್ನು ನಿಯಂತ್ರಿಸಲು ರಾಜ್ಯದ ಎಲ್ಲಾ ಪಡಿತರ ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಅನ್ನಭಾಗ್ಯ ಅಕ್ಕಿ ಅವ್ಯಾಹತವಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಬಡವರಿಗೆ ಸಿಗಬೇಕಾದ ಅಕ್ಕಿ ರೈಸ್ ಮಿಲ್ಗೆ ಹೋಗುತ್ತಿದೆ. ಪಡಿತರ ಸಾಗಿಸುವ ಲಾರಿಗಳಿಗೆ ಹಳದಿ ಬಣ್ಣ ಇರಬೇಕೆಂಬ ನಿಯಮವೂ ಪಾಲನೆ ಆಗುತ್ತಿಲ್ಲ. ಹಾಗಾಗಿ ಸಿಸಿಟಿವಿ, ಜಿಪಿಎಸ್ ಟ್ರ್ಯಾಕರ್ ಅಳವಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಸರವಣ ಸರ್ಕಾರವನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, 20 ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ ಹಾಗೂ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಸಲು ತೀರ್ಮಾನಿಸಲಾಗಿದೆ. ಅಂತೆಯೇ ಪಡಿತರ ಸಾಗಾಣೆ ಮಾಡುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಲು ನಿರ್ಧರಿಸಲಾಗಿದೆ. ಸಿಸಿಟಿವಿ, ಜಿಪಿಎಸ್ ಟ್ರ್ಯಾಕರ್‌ಗಳ ಮೇಲೆ ನಿಗಾವಹಿಸಲು ಮಾಸ್ಟರ್ ಕಂಟ್ರೋಲ್ ರೂಂ ಸ್ಥಾಪಿಸಬೇಕಿದೆ. ಈ ಮೂರು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿ ಟೆಂಡರ್ ಅಂತಿಮಗೊಳಿಸಲಾಗುವುದು ಎಂದು ಹೇಳಿದರು








