ಬೆಂಗಳೂರು: ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯದ ಬೊಕ್ಕಸದ ಮೇಲೆ ಆರ್ಥಿಕ ಹೊರೆಯಾಗಿದ್ದರೂ, ಅಭಿವೃದ್ಧಿಯೊಂದಿಗೆ ಸಮತೋಲನ ಕಾಯ್ದುಕೊಳ್ಳಲು ಮುಖ್ಯಮಂತ್ರಿಗಳು ಈ ಆಯವ್ಯಯದಲ್ಲಿ ಯಶಸ್ವಿ ಪ್ರಯತ್ನ ನಡೆಸಿದ್ದಾರೆ. ಅಹಿಂದ ವರ್ಗ, ಕೃಷಿ, ಶಿಕ್ಷಣ, ಕೈಗಾರಿಕೆ, ಹಾಗೂ ಆರೋಗ್ಯ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳತ್ತ ಅವರು ವಿಶೇಷ ಗಮನಹರಿಸಿದ್ದಾರೆ.
ಅನ್ನಭಾಗ್ಯದಡಿ ‘ಇಂದಿರಾ ಕಿಟ್’
ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ 5 ಕೆಜಿ ಅಕ್ಕಿ ಬದಲಿಗೆ, ಇನ್ನು ಮುಂದೆ ಪ್ರತಿ ತಿಂಗಳು ‘ಇಂದಿರಾ ಕಿಟ್’ ವಿತರಿಸಲಾಗುವುದು. ಈ ಕಿಟ್ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆಯನ್ನು ಒಳಗೊಂಡಿರಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಬಜೆಟ್ನಲ್ಲಿ 6,200 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ವಿದ್ಯಾರ್ಥಿಗಳಿಗಾಗಿ ‘ಇಂದಿರಾ ಕ್ಯಾಂಟೀನ್’
ಉನ್ನತ ವ್ಯಾಸಂಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದರ ಅನ್ವಯ ಧಾರವಾಡದಲ್ಲಿ 4 ಹಾಗೂ ರಾಜಧಾನಿ ಬೆಂಗಳೂರಿನಲ್ಲಿ 2 ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ಗಳು ಕಾರ್ಯಾರಂಭ ಮಾಡಲಿವೆ.








