ನವದೆಹಲಿ: ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ (IndiGo) ಮಂಗಳವಾರ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಪೀಟರ್ ಎಲ್ಬರ್ಸ್ ಅವರು ಮಾರ್ಚ್ 10, 2026 ರಿಂದ ಜಾರಿಗೆ ಬರುವಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆಗೆ ಕಾರಣವೇನು?
ಕಳೆದ ಡಿಸೆಂಬರ್ ತಿಂಗಳಲ್ಲಿ ಇಂಡಿಗೋ ಸಂಸ್ಥೆಯು ತನ್ನ ಇತಿಹಾಸದಲ್ಲೇ ಅತ್ಯಂತ ಭೀಕರವಾದ ‘ಕಾರ್ಯಾಚರಣೆಯ ಬಿಕ್ಕಟ್ಟನ್ನು’ (Operational Crisis) ಎದುರಿಸಿತ್ತು. ವಿಮಾನಗಳ ಹಾರಾಟದಲ್ಲಿನ ವಿಳಂಬ ಮತ್ತು ರದ್ದತಿಯಿಂದಾಗಿ ಸಾರ್ವಜನಿಕರು ಹಾಗೂ ಸರ್ಕಾರದ ತೀವ್ರ ಆಕ್ರೋಶಕ್ಕೆ ಸಂಸ್ಥೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಉಂಟಾದ ಒತ್ತಡ ಮತ್ತು ಪಾರದರ್ಶಕತೆಯ ಕೊರತೆಯ ಆರೋಪಗಳ ಬೆನ್ನಲ್ಲೇ ಎಲ್ಬರ್ಸ್ ಅಧಿಕಾರದಿಂದ ಕೆಳಗಿಳಿದಿದ್ದಾರೆ.
ಹೊಸ ಜವಾಬ್ದಾರಿ ಯಾರಿಗೆ?
ಪೀಟರ್ ಎಲ್ಬರ್ಸ್ ನಿರ್ಗಮನದ ನಂತರ, ಇಂಡಿಗೋದ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಹುಲ್ ಭಾಟಿಯಾ ಅವರು ಹಂಗಾಮಿ ಆಧಾರದ ಮೇಲೆ ಕಂಪನಿಯ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಮುಂದಿನ ಕಾಯಂ ವ್ಯವಸ್ಥೆ ಮಾಡುವವರೆಗೆ ಭಾಟಿಯಾ ಅವರೇ ಕಂಪನಿಯ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ಏರ್‌ಲೈನ್ಸ್ ಪ್ರಕಟಣೆಯಲ್ಲಿ ಖಚಿತಪಡಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಸೇವಾ ವ್ಯತ್ಯಯದಿಂದಾಗಿ ವಿಶ್ವಾಸಾರ್ಹತೆ ಕಳೆದುಕೊಂಡಿದ್ದ ಇಂಡಿಗೋಗೆ, ಈ ನಾಯಕತ್ವದ ಬದಲಾವಣೆಯು ಹೊಸ ಆಯಾಮ ನೀಡಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
1 ಮರ ಕಡಿದರೆ 10 ಸಸಿ ನೆಡಲು ವಿಧಿಸುವ ಶುಲ್ಕಕ್ಕೆ ವಿನಾಯಿತಿ ಇಲ್ಲ: ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ








