ನವದೆಹಲಿ: ದೇಶದ ಗ್ರಾಮೀಣ ಭಾಗದಲ್ಲಿ ಭೂ ಮಾಲೀಕತ್ವದ ಹಂಚಿಕೆಯಲ್ಲಿ ಭಾರಿ ಅಸಮಾನತೆ ಇರುವುದು ‘ವರ್ಲ್ಡ್ ಇನ್ಇಕ್ವಾಲಿಟಿ ಲ್ಯಾಬ್’ ಬಿಡುಗಡೆ ಮಾಡಿರುವ ಹೊಸ ಸಂಶೋಧನಾ ವರದಿಯಿಂದ ಬಹಿರಂಗವಾಗಿದೆ. ಕೇವಲ ಬೆರಳೆಣಿಕೆಯಷ್ಟು ಶ್ರೀಮಂತ ಕುಟುಂಬಗಳು ಬಹುಪಾಲು ಭೂಮಿಯನ್ನು ಹೊಂದಿದ್ದರೆ, ಅರ್ಧದಷ್ಟು ಗ್ರಾಮೀಣ ಕುಟುಂಬಗಳು ಭೂಹೀನವಾಗಿವೆ ಎಂಬ ಆಘಾತಕಾರಿ ಅಂಶ ವರದಿಯಲ್ಲಿದೆ.
ಗ್ರಾಮೀಣ ಭಾಗದ ಕೇವಲ ಶೇ. 10ರಷ್ಟು ಶ್ರೀಮಂತ ಕುಟುಂಬಗಳು ದೇಶದ ಒಟ್ಟು ಭೂಮಿಯ ಶೇ. 44ರಷ್ಟು ಪಾಲನ್ನು ಹೊಂದಿವೆ.ದೇಶದ ಸುಮಾರು ಶೇ. 46ರಷ್ಟು ಗ್ರಾಮೀಣ ಕುಟುಂಬಗಳು ಸಂಪೂರ್ಣವಾಗಿ ಭೂಹೀನವಾಗಿವೆ ಎಂದು ವರದಿ ತಿಳಿಸಿದೆ.
ಗ್ರಾಮೀಣ ಪ್ರದೇಶದ ಅತ್ಯಂತ ಶ್ರೀಮಂತ ಶೇ. 1ರಷ್ಟು ಕುಟುಂಬಗಳು ಶೇ. 18ರಷ್ಟು ಭೂಮಿಯನ್ನು ಹೊಂದಿದ್ದರೆ, ಶೇ. 5ರಷ್ಟು ಶ್ರೀಮಂತ ಕುಟುಂಬಗಳು ಶೇ. 32ರಷ್ಟು ಭೂಮಿಯ ಒಡೆತನ ಹೊಂದಿವೆ.
ನಿತಿನ್ ಕುಮಾರ್ ಭಾರ್ತಿ, ಡೇವಿಡ್ ಬ್ಲೇಕ್ಸ್ ಲೀ ಮತ್ತು ಸುಮಿತ್ ಮಲಿಕ್ ಸಿದ್ಧಪಡಿಸಿರುವ ಈ ವರದಿಯು, ಸುಮಾರು 65 ಕೋಟಿ ಜನರು ಹಾಗೂ 2.70 ಲಕ್ಷ ಗ್ರಾಮಗಳ ಬೃಹತ್ ದತ್ತಾಂಶವನ್ನು ಆಧರಿಸಿದೆ. ಬ್ರಿಟಿಷ್ ಆಳ್ವಿಕೆಯ ನೇರ ನಿಯಂತ್ರಣದಲ್ಲಿದ್ದ ಗ್ರಾಮಗಳಲ್ಲಿ ಅಸಮಾನತೆ ಹೆಚ್ಚಿದೆ. ಕರ್ನಾಟಕದಂತಹ ರಾಜ್ಯಗಳಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿರುವ ಕಡೆಗಳಲ್ಲಿ ಭೂ ಕೇಂದ್ರೀಕರಣವೂ (Land Concentration) ಹೆಚ್ಚಿದೆ ಎಂದು ವರದಿ ಹೇಳಿದೆ.
ಸಾಮಾಜಿಕ ಅಸಮಾನತೆ: ಸಾಮಾಜಿಕ ಸ್ತರ ವಿನ್ಯಾಸವು ಭೂ ಮಾಲೀಕತ್ವದ ಮೇಲೆ ಪ್ರಭಾವ ಬೀರಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬಗಳಲ್ಲಿ ಭೂಹೀನರ ಸಂಖ್ಯೆ ಹೆಚ್ಚಿದೆ. ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಭೂ ಸುಧಾರಣೆ ಮತ್ತು ಹಂಚಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ಕಂಡಿವೆ.







