ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಬಹುನಿರೀಕ್ಷಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (BTA) ಮೊದಲ ಹಂತದ ಮಾತುಕತೆಗಳು ಇಂದು ವಾಷಿಂಗ್ಟನ್‌ನಲ್ಲಿ ಪುನರಾರಂಭವಾಗಿವೆ. ಭಾರತದ ವಾಣಿಜ್ಯ ಇಲಾಖೆಯ ಅಪರ ಕಾರ್ಯದರ್ಶಿ ದರ್ಪಣ್ ಜೈನ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಅಮೆರಿಕದ ಅಧಿಕಾರಿಗಳೊಂದಿಗೆ ಮೂರು ದಿನಗಳ ಕಾಲ ಸುದೀರ್ಘ ಚರ್ಚೆ ನಡೆಸಲಿದೆ.
ಅಮೆರಿಕವು ಇತ್ತೀಚೆಗೆ ತನ್ನ ಆಮದು ಸುಂಕದ ವ್ಯವಸ್ಥೆಯಲ್ಲಿ ಬದಲಾವಣೆ ತಂದಿರುವ ಹಿನ್ನೆಲೆಯಲ್ಲಿ, ಫೆಬ್ರವರಿಯಲ್ಲಿ ಸಿದ್ಧವಾಗಿದ್ದ ಒಪ್ಪಂದದ ಕರಡನ್ನು ಎರಡೂ ದೇಶಗಳು ಈಗ ಮರುಪರಿಶೀಲಿಸುತ್ತಿವೆ.
ಸುಂಕದ ಬದಲಾವಣೆ: ಅಮೆರಿಕದ ಸುಪ್ರೀಂ ಕೋರ್ಟ್ ಆದೇಶದ ನಂತರ, ಟ್ರಂಪ್ ಸರ್ಕಾರವು ಎಲ್ಲಾ ದೇಶಗಳ ಮೇಲೆ ಶೇ. 10ರಷ್ಟು ಫ್ಲಾಟ್ ಸುಂಕ ವಿಧಿಸಿದೆ. ಈ ಬದಲಾದ ಸನ್ನಿವೇಶದಲ್ಲಿ ಭಾರತಕ್ಕೆ ಸಿಗಬೇಕಾದ ರಿಯಾಯಿತಿಗಳ ಬಗ್ಗೆ ಮರುಹೊಂದಾಣಿಕೆ ಮಾಡಲಾಗುತ್ತಿದೆ.
ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ವಿಧಿಸಲಾಗಿದ್ದ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ಅಮೆರಿಕ ಈಗಾಗಲೇ ತೆಗೆದುಹಾಕಿದ್ದು, ಇದು ಮಾತುಕತೆಗೆ ಪೂರಕ ವಾತಾವರಣ ನಿರ್ಮಿಸಿದೆ.ಈ ಒಪ್ಪಂದದ ಭಾಗವಾಗಿ ಭಾರತವು ಮುಂದಿನ 5 ವರ್ಷಗಳಲ್ಲಿ ಅಮೆರಿಕದಿಂದ ಸುಮಾರು $500 ಶತಕೋಟಿ ಮೌಲ್ಯದ ಇಂಧನ, ವಿಮಾನದ ಬಿಡಿಭಾಗಗಳು ಮತ್ತು ತಂತ್ರಜ್ಞಾನ ಉತ್ಪನ್ನಗಳನ್ನು ಖರೀದಿಸಲು ಉದ್ದೇಶಿಸಿದೆ.








