ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಜಾಗತಿಕ ವ್ಯಾಪಾರದ ಜೀವನಾಡಿ ಎನಿಸಿಕೊಂಡಿರುವ ‘ಹಾರ್ಮುಜ್ ಜಲಸಂಧಿ’ (Strait of Hormuz) ಮೂಲಕ ಹಡಗುಗಳ ಸಂಚಾರಕ್ಕೆ ರಕ್ಷಣೆ ನೀಡಬೇಕು ಎಂದು ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಒತ್ತಾಯಿಸಿದೆ.
ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಮಾತನಾಡುತ್ತಾ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದರು:ಹಾರ್ಮುಜ್ ಜಲಸಂಧಿಯು ವಿಶ್ವದ ಅತಿ ದೊಡ್ಡ ತೈಲ ಮತ್ತು ವಾಣಿಜ್ಯ ಮಾರ್ಗವಾಗಿದೆ. ಇಲ್ಲಿ ಹಡಗುಗಳನ್ನು ವಶಪಡಿಸಿಕೊಳ್ಳುವುದು ಅಥವಾ ಸಂಚಾರಕ್ಕೆ ಅಡ್ಡಿಪಡಿಸುವುದು ಜಾಗತಿಕ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಆದ್ದರಿಂದ ತಕ್ಷಣವೇ ಇಲ್ಲಿ ‘ಸುರಕ್ಷಿತ ಸಂಚಾರ’ (Safe Passage) ಪುನರ್ ಸ್ಥಾಪಿಸಬೇಕು.
ಇತ್ತೀಚೆಗೆ ಹಡಗುಗಳನ್ನು ವಶಪಡಿಸಿಕೊಂಡ ಘಟನೆಗಳಲ್ಲಿ ಭಾರತೀಯ ಸಿಬ್ಬಂದಿಗಳು ಸಿಲುಕಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ನಮ್ಮ ನಾಗರಿಕರ ಸುರಕ್ಷತೆ ನಮಗೆ ಅತಿ ಮುಖ್ಯ ಎಂದು ಸ್ಪಷ್ಟಪಡಿಸಿದೆ.ಯುದ್ಧವು ಮತ್ತಷ್ಟು ಉಲ್ಬಣಗೊಳ್ಳದಂತೆ ಉಭಯ ರಾಷ್ಟ್ರಗಳು ಸಂಯಮದಿಂದ ವರ್ತಿಸಬೇಕು ಮತ್ತು ರಾಜತಾಂತ್ರಿಕ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಭಾರತ ಸಲಹೆ ನೀಡಿದೆ.








