ಬೆಂಗಳೂರು: ಗುದ್ದೋಡು [ಹಿಟ್ ಅಂಡ್ ರನ್] ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ 7 ಲಕ್ಷ ರೂಪಾಯಿ ದಂಡ ವಿಧಿಸುವ ಕೇಂದ್ರ ಸರ್ಕಾರದ ರಸ್ತೆ ಸಂಚಾರಿ ಕಾನೂನು ತಿದ್ದುಪಡಿ ವಿರೋಧಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ಜನವರಿ 17 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಲಾರಿ ಮುಷ್ಕರದಿಂದ ರಾಜ್ಯದಲ್ಲಿ ಅಗತ್ಯವಸ್ತುಗಳ ಸಾಗಾಟದ ಮೇಲೆ ಪರಿಣಾಮವಾಗುವ ಸಾಧ್ಯತೆ ಇದೆ.
ಬೆಂಗಳೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ನವೀನ್ ರೆಡ್ಡಿ, ತಮಿಳುನಾಡು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೆಲ್ಲಾ ರಾಜಮಣಿ, ತಮಿಳುನಾಡು ಸಂಘದ ಡಿ. ಅಕ್ಬರ್, ಕೇರಳ ಸಂಘದ ಶಾಜು, ಆಂಧ್ರಪ್ರದೇಶದ ಬಾಷಾ ಬಾನ್ ಮತ್ತು ಮಹಾರಾಷ್ಟ್ರ ಸಂಘದ ಅಧ್ಯಕ್ಷ ಶಂಕರ ದಾದಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಲಾರಿ ಮಾಲೀಕರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದು, ಹಿಟ್ ಅಂಡ್ ರನ್ ಪ್ರಕರಣವನ್ನು ತನಗೆ ಬೇಕಾದಂತೆ ತಿರುಚುತ್ತಿದೆ. ಅಪಘಾತ ಎಂಬ ಶಬ್ಧವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯಾರೋ ನಿರ್ಲ್ಷಕ್ಯದಿಂದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದರೂ ಲಾರೀ ಮಾಲೀಕರನ್ನು ದೂಷಿಸಲಾಗುತ್ತಿದೆ. ನಿರ್ಲಕ್ಷ್ಯ ಚಾಲನೆಗೆ ಇರುವ ಹಾಲಿ ನಿಯಮಗಳನ್ನು ಸರಿಯಾಗಿ ಜಾರಿಗೆ ತಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಕುರಿತಂತೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದ್ದು, ರಾಷ್ಟ್ರಪತಿಯವರ ಅಂಕಿತ ದೊರತರೆ ಕಾನೂನು ಸ್ವರೂಪ ಪಡೆಯಲಿದೆ. ಹೀಗಾಗಿ ಸರ್ಕಾರ ಈ ಕಾನೂನು ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಯಾವುದಾದರೂ ಅಪಘಾತವಾದರೆ ಚಾಲಕರ ಮೇಲೆ ಹಲ್ಲೆ ನಡೆಯುತ್ತದೆ. ಹಿಂದಿನ ಚಕ್ರಕ್ಕೆ ಬೈಕ್ ಸಿಕ್ಕರೆ ಕೂಡಲೇ ಭಾರಿ ವಾಹನ ನಿಲ್ಲಿಸುವುದು ಸುಲಭವಿಲ್ಲ. ಒಂದು ವೇಳೆ ಲಾರಿ ನಿಲ್ಲಿಸಿ ಬಂದರೆ ಅಲ್ಲಿರುವ ಜನರು ಚಾಲಕನ ಮೇಲೆ ಹಲ್ಲೆ ಮಾಡುತ್ತಾರೆ. ಆತ್ಮರಕ್ಷಣೆಗಾಗಿ ಲಾರಿ ಚಾಲಕರು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹೋಗುತ್ತಾರೆ. ಆದರೆ ಇಂತಹ ಘಟನೆಗಳಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ಎಂದು ದಾಖಲು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಮ್ಮ ಅಸೋಸಿಯೇಷನ್ನಲ್ಲಿ ಸುಮಾರು 6 ಲಕ್ಷ ಮಾಲೀಕರಿದ್ದಾರೆ. ರಾಜ್ಯದಲ್ಲಿ ಸುಮಾರು 15 ಲಕ್ಷ ಲಾರಿ ಚಾಲಕರಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ಕೂಡ ಲಾರಿ ಮುಷ್ಕರ ನಡೆಯುತ್ತಿದೆ. ಪರಿಣಾಮವಾಗಿ ಕೆಲವೆಡೆ ಇಂಧನ ಕೊರತೆ ಭೀತಿ ಎದುರಾಗಿತ್ತು. ಹೊಸ ನಿಯಮದಿಂದಾಗಿ ಟ್ರಕ್ ಚಾಲಕರು ಅನಗತ್ಯ ಕಿರುಕುಳವನ್ನು ಎದುರಿಸಬೇಕಾಗಬಹುದು ಎಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಕೂಡ ಹೇಳಿದ್ದು, ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಶೇ 70 ರಷ್ಟು ಸರಕು ಸಾಗಾಣೆ ರಸ್ತೆ ಸಾರಿಗೆಯನ್ನು ಅವಲಂಬಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ ಮೂರು ರೂಪಾಯಿ ಟೋಲ್ ಶುಲ್ಕ ಸಂಗ್ರಹ ಮಾಡುತ್ತಿದ್ದರೂ ಸಹ ರಸ್ತೆ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಿ ಲೂಟಿ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನವರಿ 3 ರಂದು ನಡೆದ ಸಂಘದ ಸಭೆಯಲ್ಲಿ ಪ್ರತಿಭಟನೆ ನಡಸಲು ತೀರ್ಮಾನಿಸಲಾಗಿತ್ತು. ಇದೀಗ ಅನಿರ್ದಿಷ್ಟ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ಆಂಬುಲೆನ್ಸ್, ಔಷಧಿ, ಆಸ್ಪತ್ರೆ, ಅಗತ್ಯ ವಸ್ತುಗಳ ವಾಹನಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.