ನವದೆಹಲಿ: ಕೇಂದ್ರ ಬಜೆಟ್ 2026ರ ಘೋಷಣೆಯಂತೆ, ಮುಂಬರುವ ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ (2026-27) ಆರಂಭವಾಗಲಿದ್ದು, ತೆರಿಗೆ ಪಾವತಿದಾರರಲ್ಲಿ ಹಲವು ಕುತೂಹಲಗಳಿವೆ. ಪ್ರಸಕ್ತ ಸಾಲಿನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲವಾದರೂ, ಹಳೆಯ ‘ಆದಾಯ ತೆರಿಗೆ ಕಾಯ್ದೆ 1961’ರ ಬದಲಿಗೆ ಸರಳೀಕೃತ ‘ಆದಾಯ ತೆರಿಗೆ ಕಾಯ್ದೆ 2025’ ಜಾರಿಗೆ ಬರಲಿದೆ.
ಹೊಸ ತೆರಿಗೆ ಪದ್ಧತಿಯೇ ‘ಡಿಫಾಲ್ಟ್’ ಆಗಿ ಮುಂದುವರಿಯಲಿದ್ದು, ಸ್ಲ್ಯಾಬ್ಗಳು ಈ ಕೆಳಗಿನಂತಿವೆ:
ಆದಾಯದ ಮಿತಿ (ರೂ.) ತೆರಿಗೆ ದರ
0 – 4,00,000 ವರೆಗೆ ಶೂನ್ಯ (0%)
4,00,001 – 8,00,000 5%
8,00,001 – 12,00,000 10%
12,00,001 – 16,00,000 15%
16,00,001 – 20,00,000 20%
20,00,001 – 24,00,000 25%
24,00,000 ಕ್ಕಿಂತ ಹೆಚ್ಚು 30%
ಸೆಕ್ಷನ್ 87A ಅಡಿಯಲ್ಲಿ ಸಿಗುವ ರಿಯಾಯಿತಿಯಿಂದಾಗಿ, 12 ಲಕ್ಷ ರೂಪಾಯಿ ವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಸಂಬಳ ಪಡೆಯುವ ನೌಕರರಿಗೆ 75,000 ರೂ.ಗಳ ಪ್ರಮಾಣಿತ ಕಡಿತ (Standard Deduction) ಸೇರಿದರೆ, ಈ ಮಿತಿ 12.75 ಲಕ್ಷ ರೂ. ಗಳವರೆಗೆ ವಿಸ್ತರಿಸುತ್ತದೆ.
ಪ್ರಮುಖ ಬದಲಾವಣೆಗಳು ಮತ್ತು FAQs:
1. ಹಳೆಯ ತೆರಿಗೆ ಪದ್ಧತಿ ಮುಂದುವರಿಯುತ್ತದೆಯೇ?
ಹೌದು, ತೆರಿಗೆದಾರರು ತಮಗೆ ಲಾಭದಾಯಕವೆನಿಸಿದರೆ ಹಳೆಯ ತೆರಿಗೆ ಪದ್ಧತಿಯನ್ನೇ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಹೊಸ ಪದ್ಧತಿಯೇ ಆಟೋಮ್ಯಾಟಿಕ್ ಆಗಿ ಅನ್ವಯವಾಗುತ್ತದೆ.
2. ಮನೆ ಬಾಡಿಗೆ ಭತ್ಯೆ (HRA) ನಿಯಮದಲ್ಲಿ ಬದಲಾವಣೆ ಇದೆಯೇ?
ಹೌದು, ಏಪ್ರಿಲ್ 1ರಿಂದ ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ ನಗರಗಳನ್ನೂ ‘ಮೆಟ್ರೋ ನಗರ’ಗಳ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಈ ನಗರಗಳ ನೌಕರರು ಶೇ. 50ರಷ್ಟು HRA ವಿನಾಯಿತಿ ಪಡೆಯಬಹುದು. ಆದರೆ, 1 ಲಕ್ಷ ರೂ.ಗಿಂತ ಹೆಚ್ಚು ಬಾಡಿಗೆ ಪಾವತಿಸುವವರು ಮಾಲೀಕರ ಜೊತೆಗಿನ ಸಂಬಂಧವನ್ನು ಘೋಷಿಸುವುದು ಕಡ್ಡಾಯವಾಗಿದೆ.
3. ಶಿಕ್ಷಣ ಮತ್ತು ಹಾಸ್ಟೆಲ್ ಭತ್ಯೆ ಏರಿಕೆಯಾಗಿದೆಯೇ?
ಹೌದು, ಮಕ್ಕಳ ಶಿಕ್ಷಣ ಭತ್ಯೆಯನ್ನು ತಿಂಗಳಿಗೆ 100 ರೂ.ನಿಂದ 3,000 ರೂ. ಗೆ ಮತ್ತು ಹಾಸ್ಟೆಲ್ ಭತ್ಯೆಯನ್ನು 300 ರೂ.ನಿಂದ 9,000 ರೂ. ಗೆ ಏರಿಸಲಾಗಿದೆ. (ಇದು ಹಳೆಯ ಪದ್ಧತಿಯಲ್ಲಿ ಮಾತ್ರ ಲಭ್ಯ).
4. ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಏನಿದೆ?
ಫ್ಯೂಚರ್ಸ್ (Futures) ಮೇಲಿನ ತೆರಿಗೆಯನ್ನು (STT) ಶೇ. 0.02 ರಿಂದ ಶೇ. 0.05 ಕ್ಕೆ ಮತ್ತು ಆಪ್ಷನ್ಸ್ (Options) ಮೇಲಿನ ತೆರಿಗೆಯನ್ನು ಶೇ. 0.1 ರಿಂದ ಶೇ. 0.15 ಕ್ಕೆ ಏರಿಸಲಾಗಿದೆ. ಅಲ್ಲದೆ, ಶೇರುಗಳ ಬೈಬ್ಯಾಕ್ (Buyback) ಮೊತ್ತವನ್ನು ಇನ್ನು ಮುಂದೆ ‘ಬಂಡವಾಳ ಲಾಭ’ (Capital Gains) ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ.
5. ಹೊಸ ಆದಾಯ ತೆರಿಗೆ ಕಾಯ್ದೆ 2025 ಎಂದರೇನು?
ಇದು 1961ರ ಹಳೆಯ ಕಾಯ್ದೆಯನ್ನು ಬದಲಿಸಿ ತರುತ್ತಿರುವ ಹೊಸ ನಿಯಮಾವಳಿ. ಇದರ ಮುಖ್ಯ ಉದ್ದೇಶ ತೆರಿಗೆ ಸಲ್ಲಿಕೆಯನ್ನು ಸರಳಗೊಳಿಸುವುದು ಮತ್ತು ಕಾನೂನು ವಿವಾದಗಳನ್ನು ಕಡಿಮೆ ಮಾಡುವುದಾಗಿದೆ.








