ಕಲಬುರ್ಗಿ : ಜಮೀನಿನ ದಾರಿ ವಿವಾದ ಬಗೆಹರಿಸಿಕೊಳ್ಳಲು ತಂದೆಯೋರ್ವ ತನ್ನ ವಿಕಲಚೇತನ ಮಗಳನ್ನು ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಘಟನೆ ಜಿಲ್ಲೆಯ ಕಲ್ಲಹಂಗರಗಾ ಗ್ರಾಮದಲ್ಲಿ ನಡೆದಿದೆ. 17 ವರ್ಷದ ಮಂಜುಳಾ ಸಾವನ್ನಪ್ಪಿರುವ ಬಾಲಕಿ. ಆರೋಪಿ ತಂದೆ ಗುಂಡೇರಾವನನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಲ್ಲಹಂಗರಗಾ ಗ್ರಾಮದಲ್ಲಿ ಒಂದು ಕೊಲೆ ಪ್ರಕರಣ ವರದಿಯಾಗಿದೆ. ಪ್ರಾಥಮಿಕವಾಗಿ ಠಾಣೆಗೆ ಕರೆ ಬಂದಿದ್ದು, 17 ವರ್ಷದ ಬಾಲಕಿ ನೇಣು ಬಿಗಿದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಸಂಶಯಾಸ್ಪದ ರೀತಿಯಲ್ಲಿ ಸಾವು ಕಂಡುಬಂದಿತ್ತು. ಡೆತ್ ನೋಟ್ ಕೂಡ ದೊರೆತಿದೆ. ಮೃತಳು ಪಾರ್ಶ್ವವಾಯು ಬಾಧಿತಳು ಹಾಗೂ ವಿಕಲಚೇತನೆಯಾಗಿದ್ದಾಳೆ.
ಘಟನೆ ಬಗ್ಗೆ ಮೃತರ ತಾಯಿ ದೂರು ನೀಡಿದ್ದರು. ತಮ್ಮ ಕುಟುಂಬಕ್ಕೆ ಪಕ್ಕದ ಜಮೀನಿನವರ ಜೊತೆ ಸುಮಾರು ವರ್ಷಗಳಿಂದ ವಾಗ್ವಾದವಿದೆ. ಅವರು ಹೊಲಕ್ಕೆ ಹೋಗಲು ದಾರಿ ಬಿಡುತ್ತಿಲ್ಲ. ಹಾಗಾಗಿ, ಅವರೇ ಏನಾದರೂ ಮಾಡಿರಬಹುದು ಎಂದು ಕೊಲೆ ದೂರು ದಾಖಲಿಸಿದ್ದರು. ಅನುಮಾನ ವ್ಯಕ್ತಪಡಿಸಿದ ವ್ಯಕ್ತಿಗಳ ತನಿಖೆ ಸೇರಿದಂತೆ, ಎಲ್ಲಾ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿದರು. ಬಳಿಕ ತನಿಖೆಯಲ್ಲಿ, ಮೃತಳ ತಂದೆಯೇ ಮಗಳನ್ನು ಕೊಲೆಯನ್ನು ಮಾಡಿರುವುದು ಬಯಲಾಗಿದೆ.








