ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಅವರ ನಿರ್ದೇಶನದಂತೆ ಕಾಶಿಯಲ್ಲಿ ನಡೆಯುವ ಗಂಗಾ ಆರತಿಯಂತೆ ಮಂಡ್ಯ ಜಿಲ್ಲೆಯ KRS ನಲ್ಲಿ ಕಾವೇರಿ ಆರತಿಯನ್ನು ಶಾಶ್ವತವಾಗಿ ಮುಂದುವರಿಸುವುದರ ಜತೆಗೆ ಅದನ್ನು ಧಾರ್ಮಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕಾರ್ಯಕ್ರಮವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಇನ್ನು ಕೇವಲ ನೂರು ದಿನಗಳು ಬಾಕಿಯಿದ್ದು ಸಮರೋಪಾದಿಯಲ್ಲಿ ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಿದೆ.
ಕಾವೇರಿ ಆರತಿ ಕುರಿತಂತೆ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ಬುಧವಾರ ನಡೆಸಿದ ಮೊದಲ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷರೂ ಆದ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್, “ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ಕಾರ್ಯಕ್ರಮವಾಗಿರುವ ಕಾವೇರಿ ಆರತಿಯನ್ನು ದಸರಾ ಮೊದಲ ದಿನ (ಅ.2) ಆರಂಭಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಂಘಟಿತವಾಗಿ ಕಾರ್ಯನಿರ್ವಹಿಸಲಿದ್ದೇವೆ”, ಎಂದರು.
“ಡಿಸಿಎಂ ಡಿಕೆ ಶಿವಕುಮಾರ್ ಅವರ ನಿರ್ದೇಶನದಂತೆ ದಸರಾ ಸಂದರ್ಭದಲ್ಲಿ ಪ್ರತಿನಿತ್ಯ ಮತ್ತು ನಂತರದ ದಿನಗಳಲ್ಲಿ ವಾರಕ್ಕೆ ಮೂರು ದಿನ ಶುಕ್ರವಾರ. ಶನಿವಾರ. ಭಾನುವಾರ ಕಾವೇರಿ ಆರತಿ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ನಾಡಿಗೆ ಅನ್ನ, ನೀರು ನೀಡುವ ಕಾವೇರಿ ತಾಯಿ ಭಾವನಾತ್ಮಕ ವಿಚಾರ, ಇದರ ಜೊತೆಯಲ್ಲಿ ನಾಡಿನ ಸಾಂಸ್ಕೃತಿಕ, ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತದೆ. ಸ್ಥಳೀಯರಿಗೆ ಉದ್ಯೋಗಕ್ಕೂ ಅವಕಾಶ ಕಲ್ಪಿಸುವುದಕ್ಕೆ ಆದ್ಯತೆ ನೀಡಬೇಕಾಗಿದೆ”, ಎಂದು ಹೇಳಿದರು.
“ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ಆರತಿಗೆ 92ಕೋಟಿ ರೂ. ವೆಚ್ಚ ಮಾಡಲು ಅನುಮೋದನೆ ನೀಡಲಾಗಿದೆ. ಇದರಲ್ಲಿ ಕೇವಲ ಕಾವೇರಿ ಆರತಿ ಮಾತ್ರವಲ್ಲ, ಆರತಿಗೆ ಬರುವವರಿಗೆ ಮೂಲ ಸೌಕರ್ಯ, ರಸ್ತೆಗಳ ಅಭಿವೃದ್ಧಿ, ಲೇಸರ್ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ”, ಎಂದು ತಿಳಿಸಿದರು.
ನದಿ ಮಧ್ಯೆ ತೇಲುವ ವೇದಿಕೆ:
“ಕಾವೇರಿ ಆರತಿಗೆ ಕೆಆರ್‌ಎಸ್ ಅಣೆಕಟ್ಟಿನ ಬೃಂದಾವನದಲ್ಲಿರುವ ಜಾಗದಲ್ಲಿ ನದಿ ಮಧ್ಯೆ ತೇಲುವ ಸೇತುವೆ ರಚಿಸುವ ನಿಟ್ಟಿನಲ್ಲಿ ವಾಸ್ತುಶಿಲ್ಪಿಗಳಿಗೆ ತಿಳಿಸಲಾಗಿದೆ. ಸುತ್ತಲೂ ಜನರು ಕುಳಿತು ನೋಡಲು ವಿವಿಧ ಅಂತಸ್ತಿನ ಗ್ಯಾಲರಿ ಸಿದ್ಧಪಡಿಸಲಾಗುವುದು. ಗ್ಯಾಲರಿ ಕೆಳಗೆ ಶೌಚಾಲಯ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಜತೆಗೆ ಆಹಾರದ ವ್ಯವಸ್ಥೆಗೆ ಅಗತ್ಯವಿರುವ ಸ್ಟಾಲ್‌ಗಳನ್ನು ನಿರ್ಮಿಸಲಾಗುವುದು. ಸಂಜೆ 6ರಿಂದ 6.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, 6.30ರಿಂದ 7 ಗಂಟೆಯವರೆಗೆ ಕಾವೇರಿ ಆರತಿ, ಬಳಿಕ ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ, ಮ್ಯೂಸಿಕಲ್ ಫೌಂಟೇನ್, ಲೇಸರ್ ಪ್ರದರ್ಶನ, ಪಟಾಕಿ ಪ್ರದರ್ಶನಗಳನ್ನು ಆಯೋಜಿಸುವ ಕುರಿತು ಚರ್ಚಿಸಲಾಗಿದೆ. ಉಪಮುಖ್ಯಮಂತ್ರಿಗಳ ಜತೆ ಚರ್ಚಿಸಿ ಇದನ್ನು ಅಂತಿಮಗೊಳಿಸಲಾಗುವುದು”, ಎಂದು ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.
“ಸಾಂಸ್ಕೃತಿಕ ಕಾರ್ಯಕಮದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇದರ ಜತೆಗೆ ಸ್ಥಳೀಯ ಗುಡಿ ಕೈಗಾರಿಕೆಗಳು, ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಹೋಟೆಲ್ ಉದ್ಯಮದ ಬೆಳವಣಿಗೆಗೂ ಯೋಜನೆ ರೂಪಿಸಲಾಗುತ್ತದೆ. ಒಟ್ಟಾರೆ ಕಾವೇರಿ ಆರತಿಯನ್ನು ಹೊಸ ಪ್ರಯೋಗವಾಗಿ ವಿಭಿನ್ನತೆ ಮತ್ತು ವಿಜೃಂಬಣೆಯಿಂದ ಜನಪರ ಕಾರ್ಯ್ರಮವಾಗಿ ರೂಪಿಸಲಾಗುವುದು”, ಎಂದರು.
ಟಿಕೆಟಿಂಗ್ ವ್ಯವಸ್ಥೆ:
“ಕಾವೇರಿ ಆರತಿಯನ್ನು ಶಾಶ್ವತವಾಗಿ ಆಯೋಜಿಸುತ್ತಿರುವುದರಿಂದ ಸಾಕಷ್ಟು ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ ಟಿಕೆಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಈ ಕುರಿತು ಉಪಮುಖ್ಯಮಂತ್ರಿಗಳ ಜತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇದರ ಜತೆಗೆ ಒಂದು ಪ್ರದೇಶದಲ್ಲಿ ಜನರು ಉಚಿತವಾಗಿಯೂ ಕಾವೇರಿ ಆರತಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು”, ಎಂದು ತಿಳಿಸಿದರು.
“ಕಾವೇರಿ ಆರತಿ ವೀಕ್ಷಿಸಲು ಯಾವುದೇ ಸಮಸ್ಯೆಯಾಗದಂತೆ ಪ್ರತಿ ದಿನ 8ರಿಂದ 10 ಸಾವಿರ ಮಂದಿ ಕುಳಿತು ನೋಡಲು ವ್ಯವಸ್ಥೆ ಮಾಡಲಾಗುವುದು. ಆರಂಭಿಕವಾಗಿ ಮಹಾಕುಂಭ ಮೇಳದಲ್ಲಿ ಮಾಡಿದಂತೆ ಟೆಂಟ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯೋಚಿಸಲಾಗಿದೆ. ಹಂತ ಹಂತವಾಗಿ ಗ್ಯಾಲರಿಯನ್ನು ವಿಸ್ತರಿಸಲು ಅವಕಾಶ ಮಾಡಿಕೊಡಲಾಗುವುದು”, ಎಂದರು.
ವಿಶೇಷ ಪ್ರವಾಸೋದ್ಯಮ ಪ್ಯಾಕೇಜ್:
ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ ಅವರು ಮಾತನಾಡಿ, “ಕಾವೇರಿ ಆರತಿ ಕೇವಲ ಒಂದು ಕಾರ್ಯಕ್ರಮವಾಗಿ ಮಾತ್ರ ನಡೆಯುವುದಿಲ್ಲ. ಬದಲಾಗಿ ಮಂಡ್ಯ, ಮೈಸೂರು, ಹಾಸನ, ಕೊಡಗು, ಚಾರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿರಲಿದೆ. ಅದಕ್ಕಾಗಿ ಧಾರ್ಮಿಕ, ಸಾಂಸ್ಕೃತಿಕ, ಪರಿಸರ, ಅರಣ್ಯ ಮತ್ತಿತರ ಅಂಶಗಳನ್ನೊಳಗೊಂಡ ವಿಶೇಷ ಪ್ರವಾಸೋದ್ಯಮ ಪ್ಯಾಕೇಜ್ ರೂಪಿಸುವಂತೆ ಉಪಮಖ್ಯಮಂತ್ರಿಯವರು ನಿರ್ದೇಶನ ನೀಡಿದ್ದಾರೆ. ಈ ಕುರಿತು ಪ್ರವಾಸೋದ್ಯಮ ಇಲಾಖೆ ಜತೆ ಚರ್ಚಿಸಲಾಗುವುದು”, ಎಂದು ಹೇಳಿದರು.
ಸಭೆಯಲ್ಲಿ ಹಾಜರಿದ್ದ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, “ಕಾವೇರಿ ಆರತಿ ಮಂಡ್ಯ ಜಿಲ್ಲೆ ಮಾತ್ರವಲ್ಲದೆ, ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಸಂಬಂಧಿಸಿದ ಜಿಲ್ಲೆಗಳ ಎಲ್ಲಾ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಕಾರ್ಯಕ್ರಮ ರೂಪಿಸಲಾಗುವುದು”, ಎಂದು ತಿಳಿಸಿದರು.
ಸಭೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳು, ಕಾವೇರಿ ನೀರಾವರಿ ನಿಗಮ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಮಂದಿನ ಸಭೆಯನ್ನು ಮಂಡ್ಯದಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.
ಇನ್ಮುಂದೆ ವಿದೇಶಿ ಕಾನೂನು ಸಂಸ್ಥೆ, ವಕೀಲರು ಭಾರತದಲ್ಲಿ ವ್ಯಾಜ್ಯೇತರ ವಿಷಯ ಅಭ್ಯಾಸಕ್ಕೆ ಅವಕಾಶ: BCI
GOOD NEWS: ರಾಜ್ಯದಲ್ಲಿ ‘NHM ಯೋಜನೆ’ಯಡಿ ನೇಮಕಗೊಳ್ಳುವ ವೈದ್ಯರು, ಸ್ಟಾಫ್ ನರ್ಸ್ ಗಳಿಗೆ ಭರ್ಜರಿ ಸಿಹಿಸುದ್ದಿ