ವಿಜಯನಗರ : ಆಸ್ತಿ ಆಸೆಗಾಗಿ ಹೆತ್ತ ಅಣ್ಣನನ್ನೇ ತಮ್ಮ ಮತ್ತು ಆತನ ಸ್ನೇಹಿತ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಕೊಲೆಗೀಡಾದ ಯುವಕನನ್ನು ಹರಪನಹಳ್ಳಿ ತಾಲೂಕಿನ ಹಗರಿ ಶಿರನಹಳ್ಳಿ ಗ್ರಾಮದ ಮರಳುಸಿದ್ದೇಶ (26) ಎಂದು ಗುರುತಿಸಲಾಗಿದೆ.
ಇನ್ನು ಕೊಲೆ ಮಾಡಿದ ಈತನ ಸ್ವಂತ ತಮ್ಮ ಹಗರಿಶಿರನಹಳ್ಳಿಯ ಪತ್ರಿಗೌಡ (24) ಹಾಗೂ ಈತನ ಸ್ನೇಹಿತ ಕಡಬಗೆರೆ ಗ್ರಾಮದ ಉತ್ತಂಗಿ ನಾರಪ್ಪ (29) ಎಂಬವರನ್ನು ಬಂಧಿಸಲಾಗಿದೆ. ಕೊಲೆ ಮಾಡಿದ ಬಳಿಕ ಇದೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಆರೋಪಿಗಳ ಬಣ್ಣ ಬಯಲಾಗಿದೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮರಳುಸಿದ್ದೇಶ ಮನೆಯ ಜವಾಬ್ದಾರಿ, ಜಮೀನು, ಟ್ರ್ಯಾಕ್ಟರ್ ನೋಡಿಕೊಳ್ಳುತ್ತಿದ್ದ. ಆದರೆ ಆಸ್ತಿಯಲ್ಲಿ ಪಾಲು ಬೇಕು, ಹಂಚಿ ಕೊಡಿ ಎಂದು ತಾಯಿ ಮತ್ತು ಅಣ್ಣನೊಂದಿಗೆ ಪತ್ರಿಗೌಡ ಜಗಳವಾಡಿದ್ದ. ಮಾ.13ರಂದು ಮಧ್ಯಾಹ್ನ ಇದೇ ವಿಚಾರವಾಗಿ ಜಗಳ ತೆಗೆದಿದ್ದ ಆರೋಪಿ ಪತ್ರಿಗೌಡ, ಪಾಲು ಕೊಡದಿದ್ದರೆ ನಾನು ದುಡಿಯಲು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಮನೆ ಬಿಟ್ಟು ಹೋಗಿದ್ದ.
ಮೃತ ಮರಳುಸಿದ್ದೇಶನು ಮತ್ತೋರ್ವ ಆರೋಪಿ ಉತ್ತಂಗಿ ನಾರಪ್ಪ ಜೊತೆ ತಮ್ಮನ ಹುಡುಕಲು ಹೋಗಿದ್ದ ರಾತ್ರಿ ಒಂದು ಗಂಟೆಗೆ ತಾಯಿ ಶಾಂತಮ್ಮಗೆ ಅಪಘಾತದಲ್ಲಿ ಮರುಳಸಿದ್ದ ಸಾವನ್ನಪ್ಪಿದ್ದಾನೆ ಎಂದು ಕರೆ ಮಾಡಿ ತಿಳಿಸಿದ್ದಾರೆ. ಶಾಂತಮ್ಮ ಅವರು ಕೂಡಲೇ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಿದ್ದ ಶವ ನೋಡಿ ಮರುಳುಸಿದ್ದೇಶನ ತಲೆ, ಎದೆ, ಮುಖದ ಮೇಲೆ ಬಲವಾದ ಪೆಟ್ಟುಗಳಾಗಿದ್ದವು.
ಆದರೆ ಇದು ವಾಹನ ಅಪಘಾತದಿಂದ ಆದ ಗಾಯಗಳಂತೆ ಇರಲಿಲ್ಲ. ಬೈಕ್ ನಲ್ಲಿದ್ದ ತಮ್ಮ ಮತ್ತು ಆತನ ಸ್ನೇಹಿತನಿಗೆ ಯಾವುದೇ ಸಣ್ಣ ಗಾಯವೂ ಆಗಿರಲಿಲ್ಲ. ಆಸ್ತಿ ವಿಚಾರದ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆಂದು ತಾಯಿ ಶಾಂತಮ್ಮ ಅರಸೀಕೆರೆ ಪೊಲೀಸರಿಗೆ ದೂರು ನೀಡಿದ್ದರು.ದೂರು ನೀಡಲು ಬಂದಾಗ ಇದು ಒಂದು ಕೊಲೆ ಇರಬಹುದು ಎಂದು ತಿಳಿದು ಅನುಮಾನಗೊಂಡ ಪೊಲೀಸರು, ತಮ್ಮನೇ ಆಸ್ತಿಗಾಗಿ ಅಣ್ಣನ ಕೊಲೆ ಮಾಡಿರುವುದಾಗಿ ಬಯಲು ಮಾಡಿದ್ದಾರೆ.








