ತುಮಕೂರು : ತುಮಕೂರು ತಾಲೂಕಿನ ಗೂಳೂರು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬಾಲಕಿಯ ಬೆರಳುಗಳು ಬಾಗಿಲಿಗೆ ಸಿಲುಕಿ ತುಂಡಾಗಿರುವ ಘಟನೆ ಫೆಬ್ರವರಿ 9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿದ್ಯಾರ್ಥಿನಿಯ ಪೋಷಕರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
1ನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿ ಬೆರಳುಗಳು ಕಟ್ ಆಗಿದ್ದು, ಬಾಲಕಿ ಗೂಳೂರು ಗ್ರಾಮದ ಅಂಬಿಕಾ, ಬಸವರಾಜು ದಂಪತಿಯ ಪುತ್ರಿ. ಚಿನ್ಮಯಿ ಬಲಗೈನ ಮಧ್ಯದ ಬೆರಳು ಹಾಗೂ ಉಂಗುರದ ಬೆರಳು ಕಟ್ ಆಗಿವೆ. ಶಾಲಾ ಕೊಠಡಿಯ ಕಬ್ಬಿಣದ ಬಾಗಿಲಿಗೆ ಸಿಲುಕಿ ಬೆರಳುಗಳು ತುಂಡಾಗಿವೆ. ಮಧ್ಯಾಹ್ನ ಬಿಸಿ ಊಟಕ್ಕೆ ಬಿಟ್ಟ ವೇಳೆ ಘಟನೆ ನಡೆದಿದೆ.
ಈ ಕುರಿತು ಎಸ್ಪಿ ಅಶೋಕ್ ಕೆ. ವಿ ಅವರು ಮಾತನಾಡಿದ್ದು, ‘ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ಬಿಟ್ಟಾಗ ಬಾಗಿಲಿಗೆ ಕೈ ಇಟ್ಟಿದ್ದ ಮಗುವಿನ ಬೆರಳುಗಳು ಕಟ್ ಆಗಿವೆ. ತುಂಡಾಗಿರುವ ಬೆರಳುಗಳ ಉಳಿದ ಭಾಗ ಇನ್ನೂ ಸಿಕ್ಕಿಲ್ಲ. ಶೋಧಕಾರ್ಯ ನಡೆಯುತ್ತಿದೆ. ಸದ್ಯ ನಿರ್ಲಕ್ಷ್ಯ ತೋರಿದ ಶಾಲೆಯ ಹೆಡ್ ಮಾಸ್ಟರ್, ಶಿಕ್ಷಕರು, ಬಿಇಒ ಹಾಗೂ ಸಿಆರ್‌ಪಿ ಸೇರಿ ನಾಲ್ವರ ಮೇಲೆ ಎಫ್ಐಆರ್ ದಾಖಲು ಮಾಡಿದ್ದೇವೆ ಎಂದಿದ್ದಾರೆ.








