ಕಲಬುರ್ಗಿ : ನಗರದ ಸರಾಪ್ ಬಜಾರ್ನಲ್ಲಿ ಹಾಡಹಗಲೇ ನಡೆದಿದ್ದ ಮಲಿಕ್ ಜ್ಯುವೆಲರಿ ಮೇಕಿಂಗ್ ಶಾಪ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮುಂಬೈ ಮೂಲದ ಅರ್ಬಾಜ್ ಶೇಖ (22) ಹಾಗೂ ಮಹ್ಮದ್ ಸಾಜೀದ್ (25) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದ್ದು ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಬಂಧಿತರಿಂದ ಚಿನ್ನಾಭರಣ ಮಾರಾಟ ಮಾಡಿ ಬಂದಿದ್ದ 35 ಸಾವಿರ ರೂ. ನಗದು, ದರೋಡೆ ವೇಳೆ ಮಾಲೀಕನಿಗೆ ತೋರಿಸಿ ಬೆದರಿಕೆ ಹಾಕಿದ್ದ ಗನ್ ಮಾದರಿಯ ಲೈಟರ್ ಹಾಗೂ ಒಂದು ಮಚ್ಚನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಜುಲೈ 11ರಂದು ಹಾಡಹಗಲೇ ಸರಾಪ್ ಬಜಾರ್ನ ಜನನಿಬಿಡ ಪ್ರದೇಶದಲ್ಲಿದ್ದ ಮಲಿಕ್ ಜ್ಯುವೆಲರಿ ಮೇಕಿಂಗ್ ಶಾಪ್ ನಲ್ಲಿ ದರೋಡೆ ನಡೆದಿತ್ತು.
ಶಾಪ್ ಗೆ ನುಗ್ಗಿದ ನಾಲ್ವರು ದರೋಡೆಕೋರರು, ಮಾರಕಾಸ್ತ್ರ ತೋರಿಸಿ ತಲೆಗೆ ಗನ್ ಪಾಯಿಂಟ್ ಇಟ್ಟು, ಮಾಲಿಕನ ಕೈಕಾಲು ಕಟ್ಟಿ, ಬಾಯಿಗೆ ಟೇಪ್ ಹಚ್ಚಿ ಲಾಕರ್ನಲ್ಲಿದ್ದ ಚಿನ್ನವನ್ನು ದರೋಡೆ ಮಾಡಿದ್ದರು. ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಪೊಲೀಸರ ಪ್ರತ್ಯೇಕ ವಿಶೇಷ ತಂಡಗಳನ್ನು ರಚನೆ ಮಾಡಿದ್ದರು.
ತೆಲಂಗಾಣ, ಮುಂಬೈ, ಪಶ್ಚಿಮ ಬಂಗಾಳ ಸೇರಿ ವಿವಿಧಡೆ ದರೋಡೆಕೋರರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದರು. ಕಡೆಗೂ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ 2 ಕೆ.ಜಿ. 865 ಗ್ರಾಂ ಚಿನ್ನ ಮತ್ತು ₹4.80 ಲಕ್ಷ ನಗದು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಮತ್ತಿಬ್ಬರನ್ನು ಬಂಧಿಸಿರುವುದರಿಂದ ಆರೋಪಿಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.