ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಕ್ಷೇತ್ರವಾಗಿರುವಂತ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಗೆಲ್ಲುವುದಕ್ಕಾಗಿ ಬರೋಬ್ಬರಿ 500 ಕೋಟಿ ರೂ. ಖರ್ಚು ಮಾಡಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಆರೋಪಿಸಿದ್ದಾರೆ.
ಡಿಕೆ ಬ್ರದರ್ಸ್ ದೈತ್ಯಶಕ್ತಿ, ಹಣಬಲ, ಅಧಿಕಾರ ಬಲವನ್ನು ಚುನಾವಣೆಯಲ್ಲಿ ತೋರಿಸಿದ್ದಾರೆ. ಅವರೇ ಸಮಸ್ಯೆ ಸೃಷ್ಠಿಸಿ, ಅವರೇ ಅದನ್ನ ಬಗೆಹರಿಸುತ್ತಾರೆ. ಅಂತವರ ನಡುವೆ ನಮ್ಮದು ರೋಚಕ ಹೋರಾಟ ನಡೆದಿದೆ. ಆದರೆ, ಕಾಂಗ್ರೆಸ್ ನವರು ಆಫ್ ದ ರೆಕಾರ್ಡ್ 400-500ಕೋಟಿ ಖರ್ಚು ಮಾಡಿದ್ದೀವಿ ಎಂದು ಹೇಳಿದ್ದಾರೆ. ಅಷ್ಟು ಖರ್ಚು ಮಾಡಿ ಗೆಲ್ಲಲೇಬೇಕು ಅನ್ನೋ ಹಠ ಇದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಆಸೆ ಇಟ್ಕೊಂಡಿದ್ದಾರೆ ಎಂದರು.
ನಮ್ಮ ಪಕ್ಷದಿಂದ ಡಾ.ಸಿ.ಎನ್. ಮಂಜುನಾಥ್ ಅವರ ಒಳ್ಳೆತನ ಮುಂದಿಟ್ಟುಕೊಂಡು ಜನರ ಓಟ್ ಕೇಳಿದ್ದೇವೆ. ಹಾಗಾಗಿ, ಫಲಿತಾಂಶ ಏನಾಗುತ್ತೋ ನೋಡೊಣ. ಡಾಕ್ಟರ್ ಗೆದ್ದರೆ ಜನಶಕ್ತಿಗೆ ಬೆಲೆ ಇದೆ ಅನ್ನೋದು ಗೊತ್ತಾಗುತ್ತದೆ. ಇನ್ನು ಡಿ.ಕೆ. ಶಿವಕುಮಾರ್ ಶತ್ರು ಭೈರವಿ ಯಾಗ ಮಾಡಿದ ವಿಚಾರವನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಕೇರಳದ ಸಚಿವರು, ದೇವಾಲಯ ಆಡಳಿತ ಮಂಡಳಿ ಆ ರೀತಿ ಯಾವುದೇ ಪೂಜೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆಯ ಹಿಂದಿನ ದಿನ ಮಹಿಳೆಯರಿಗೆ 2,000 ರೂ. ಜಮಾ ಮಾಡಿದ್ದಾರೆ. ಎಲ್ಲರ ಅಕೌಂಟ್ ಗೆ ಹಣ ಹಾಕಿದ್ದೀವಿ, ಮಹಿಳಾ ಮತದಾರರು ಗೆಲ್ಲಿಸುತ್ತಾರೆ ಎಂದು ಸ್ವತಃ ಕಾಂಗ್ರೆಸ್‌ನವರೇ ಹೇಳಿದ್ದಾರೆ. ಈಗ ಫಲಿತಾಂಶಕ್ಕೆ ಕಾದು ನೋಡೊಣ, ಜನಾಭಿಪ್ರಾಯ ಏನಿದೆ ಅನ್ನೋದು ಗೊತ್ತಾಗುತ್ತದೆ. ಈವರೆಗೂ ನಾವೇನು ಕಾನ್ಫಿಡೆನ್ಸ್ ಕಳೆದುಕೊಂಡಿಲ್ಲ. ನಮಗೆ ಎರಡೂ ಪಕ್ಷಗಳ ಬಲ ಮತ್ತು ಶಕ್ತಿ ಇದೆ ಎಂದು ಹೇಳಿದರು.