ಬೆಂಗಳೂರು: ಲೇಡೀಸ್ ಪೇಯಿಂಗ್ ಗೆಸ್ಟ್ಗೆ (ಪಿ.ಜಿ) ನುಗ್ಗಿ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿ, ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ಗಿಗ್ ಕಾರ್ಮಿಕನನ್ನು ನಗರದ ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನರೇಶ್ (30) ಬಂಧಿತ ಆರೋಪಿ. ಈತ ಆಂಧ್ರಪ್ರದೇಶದ ಮದನಪಲ್ಲಿ ಮೂಲದವನಾಗಿದ್ದು, ಕಳೆದ ಎರಡು ವರ್ಷಗಳಿಂದ ನಗರದ ಆವಲಹಳ್ಳಿಯಲ್ಲಿ ವಾಸವಾಗಿದ್ದ. ಆಗಸ್ಟ್ 29ರ ನಸುಕಿವ ಜಾವ 4.30ರ ಸುಮಾರಿಗೆ ಸುದ್ದುಗುಂಟೆಪಾಳ್ಯ ಬಳಿಯ ಗಂಗೋತ್ರಿ ಸರ್ಕಲ್ ಬಳಿಯಿರುವ ಪಿಜಿಯೊಂದಕ್ಕೆ ನುಗ್ಗಿದ ಆರೋಪಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಬೈಕ್ ಟ್ಯಾಕ್ಸಿ ಹಾಗೂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಬೈಕ್ನಲ್ಲಿ ಹೋಗುವಾಗ ಪಿಜಿಯ ಬಾಗಿಲು ತೆಗೆದಿರುವುದನ್ನು ಕಂಡು ಒಳಗೆ ನುಗ್ಗಿದ್ದ. ಈ ವೇಳೆ, ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಆಕೆಯ ಬಳಿಯಿದ್ದ 2,500 ಸಾವಿರ ರೂಪಾಯಿ ಕಸಿದು ಪರಾರಿಯಾಗಿದ್ದ. ಈ ಸಂಬಂಧ ಯುವತಿ ನೀಡಿದ ದೂರು ಆಧರಿಸಿ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿಯ ಶಿಕಾರಿಪಾಳ್ಯ ಬಳಿ ಬಂಧಿಸಲಾಗಿದೆ.