ಹುಬ್ಬಳ್ಳಿ : ಸಿಎಂ ಸಿದ್ದರಾಮಯ್ಯ ಇನ್ನು ಎರಡು ವರ್ಷ 10 ತಿಂಗಳು ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ನು ಎರಡು ವರ್ಷ 10 ತಿಂಗಳು ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಶಾಸಕರು ಐದು ವರ್ಷಕ್ಕಾಗಿ ಸಿಎಂ ಸಿದ್ದರಾಮಯ್ಯರನ್ನು ಆಯ್ಕೆ ಮಾಡಿದ್ದೇವೆ. ಯಾವುದೇ ಪಕ್ಷ ಚೇಂಜ್ ಮಾಡಬೇಕಾದರೆ ಪಾರ್ಟಿ ಹೈಕಮಾಂಡ್ ಶಾಸಕರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಂತಹ ಪರಿಸ್ಥಿತಿ ಸದ್ಯ ಉದ್ಭವಿಸಿಲ್ಲ ಎಂದು ಖರ್ಗೆ ಕೂಡ ಹೇಳಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಮಾಸ್ ಲೀಡರ್ ಎಂದು ತಿಳಿಸಿದರು.
ಬಿಜೆಪಿಯವರು ಚಿಲ್ಲರೆ ಟೀಕೆ ಮಾಡುತ್ತಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ನ್ಯಾಯದ ಬಗ್ಗೆ ಮಾತನಾಡಲಿ ಬಿಜೆಪಿಯವರಿಗೆ ಉತ್ತಮ ಮಾರ್ಗದರ್ಶಕರ ಅವಶ್ಯಕತೆ ಇದೆ. ಮೊದಲ ತ್ರೈಮಾಸಿಕದಲ್ಲಿ ರಾಜ್ಯದಲ್ಲಿ 23% ತೆರಿಗೆ ಸಂಗ್ರಹವಾಗಿದೆ. ಗ್ಯಾರಂಟಿಯ ಬಗ್ಗೆ ಟೀಕಿಸುವ ಬಿಜೆಪಿ ಅವರು ತಿಳಿದುಕೊಳ್ಳಬೇಕು ನಾವು ಗ್ಯಾರಂಟಿಗಳಿಗಾಗಿ 52,000 ಕೋಟಿ ರೂಪಾಯಿ ಹಣ ನೀಡಿದ್ದೇವೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಹಣ ಪೋಲು ಅಂತ ಹೇಳಬೇಡಿ. ಬಿಜೆಪಿಯವರ ಟೀಕೆಗೆ ತಲೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಗ್ಯಾರಂಟಿ ಯೋಜನೆಯಲ್ಲಿ 1.2 ಲಕ್ಷ ಕೋಟಿ ರೂಪಾಯಿ ಹಣ ಜನರಿಗೆ ಹೋಗುತ್ತಿದೆ. ಅನೇಕ ಯೋಜನೆಗಳ ಮೂಲಕ ಜನರ ಖಾತೆಗೆ ಹಣ ಜಮೆ ಆಗುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಎಂದು ರಾಯರೆಡ್ಡಿ ತಿಳಿಸಿದರು.