ಬೆಂಗಳೂರು: ಆನ್‌ಲೈನ್ ಮತ್ತು ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಸಂಬಂಧ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯಡಿ ಬಂಧಿಸಿರುವ ಕ್ರಮವನ್ನು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ವೀರೇಂದ್ರ ಪತ್ನಿ ಆರ್.ಡಿ.ಚೈತ್ರಾ ಸಲ್ಲಿಸಿರುವ ಅರ್ಜಿ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ವೀರೇಂದ್ರ ಅವರ ಬಂಧನವನ್ನು ಕಾನೂನು ಬಾಹಿರವೆಂದು ಘೋಷಿಸಿ, ತಕ್ಷಣವೇ ಅವರನ್ನು ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ಚೈತ್ರಾ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ಸೆ.8ಕ್ಕೆ ಮುಂದೂಡಿತು.
ಪ್ರಕರಣ ಏನು?
ಆಗಸ್ಟ್ 22ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ವೀರೇಂದ್ರ ಪಪ್ಪಿ ನಿವಾಸ ಮೇಲೆ ಮುಂಜಾನೆ 5 ಗಂಟೆಗೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಮಧ್ಯರಾತ್ರಿವರೆಗೂ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಅಂದು ಪಪ್ಪಿ ಮನೆಯಲ್ಲಿ ಕೋಟಿ ಕೋಟಿ ಹಣ ಜೊತೆ ಚಿನ್ನಾಭರಣ ವಿದೇಶಿ ಕರೆನ್ಸಿಯನ್ನ ಇಡಿ ವಶಕ್ಕೆ ಪಡೆದಿತ್ತು. ಸತತ 18 ಗಂಟೆಗೂ ಹೆಚ್ಚು ಕಾಲ ಇಡಿ ಅಧಿಕಾರಿಗಳು ಪಪ್ಪಿ ಕೋಟೆಯನ್ನು ಜಾಲಾಡಿದ್ದರು. ಈ ವೇಳೆ 1 ಕೋಟಿ ರೂ ವಿದೇಶಿ ಕರೆನ್ಸಿ ಸೇರಿದಂತೆ ಸುಮಾರು 12 ಕೋಟಿ ರೂ ನಗದು ಪತ್ತೆ ಆಗಿತ್ತು. 6 ಕೋಟಿ ರೂ. ಮೌಲ್ಯದ ಚಿನ್ನ, ಸುಮಾರು 10 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿತ್ತು.