ಬೆಂಗಳೂರು: ರಾಜ್ಯ ಸರ್ಕಾರದಿಂದ ಗೂಂಡಾ ಕಾಯ್ದೆಯನ್ನು ಮಿಸ್ ಯೂಸ್ ಮಾಡಿಕೊಳ್ಳದೇ, ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳೋದಕ್ಕೆ ಮಹತ್ವದ ಸೂಚನೆ ಹೊರಡಿಸಿದೆ. ಈ ಸಂಬಂಧ ಗೂಂಡಾ ಕಾಯ್ದೆಯಡಿ ಪ್ರಕರಣಗಳನ್ನು ನಿರ್ವಹಿಸುವ ಬಗ್ಗೆ ಮಹತ್ವದ ಸೂಚನೆಯನ್ನು ಪೊಲೀಸ್ ಇಲಾಖೆಗೆ ತಿಳಿಸಿದೆ.
ಈ ಕುರಿತಂತೆ ಒಳಾಡಳಿತ ಇಲಾಖೆಯ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಅವರು ಹೊರಡಿಸಿರುವಂತ ಸುತ್ತೋಲೆಯಲ್ಲಿ ಕರ್ನಾಟಕ ಅಕ್ರಮ ಭಟ್ಟಿ ಸಾರಾಯಿ ವ್ಯವಹಾರ, ಔಷಧಾಪರಾಧ, ಜೂಜುಕೋರ, ಗೂಂಡಾ ಅನೈತಿಕ ವ್ಯವಹಾರಗಳ ಅಪರಾಧ ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ವಿಡಿಯೋ ಅಥವಾ ಆಡಿಯೋ ಪ್ರೈರೇಟ್ ಚಟುವಟಿಕೆಗಳ ತಡೆ ಅಧಿನಿಯಮ 1985ರ ಕಾಯ್ದೆಯ ಕಲಂ 3 ಉಪ ಕಲಂ (1) & (2) ರಡಿ ಜಿಲ್ಲಾಧಿಕಾರಿ/ ಪೊಲೀಸ್ ಆಯುಕ್ತರಿಗೆ ಬಂಧನ ಆದೇಶ ಹೊರಡಿಸಲು ಅವಕಾಶವಿರುತ್ತದೆ ಎಂದಿದೆ.
ಇಂತಹ ಪ್ರಕರಣಗಳ ಸೂಕ್ತತೆಯನ್ನು ಸದರಿ ಕಾಯ್ದೆಯ ಕಲಂ-9 ರಡಿ ರಚಿತವಾದ ಮಾನ್ಯ ಉಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರುಗಳನ್ನೊಳಗೊಂಡ ಸಲಹಾ ಮಂಡಳಿಯು ಪರಿಶೀಲಿಸುತ್ತದೆ. ಇತ್ತೀಚೆಗೆ ಬಹಳಷ್ಟು ಪ್ರಕರಣಗಳಲ್ಲಿ ತಾಂತ್ರಿಕ ಲೋಪದೋಷಗಳಿರುವುದನ್ನು ಸರ್ಕಾರ, ಮಾನ್ಯ ಸಲಹಾ ಮಂಡಳಿ ಹಾಗೂ ಗೂಂಡಾ ಬಂಧಿಗಳ ಪರವಾಗಿ ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಕೆಯಾಗುವ ಹೇಬಿಯಸ್ ಕಾರ್ಪಸ್ ವಿಚಾರಣೆಯ ಸಮಯದಲ್ಲಿ ಗಮನಿಸಲಾಗಿರುತ್ತದೆ. ಈ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ:09.01.2024ರಂದು ನಡೆದ ಸಭೆಯಲ್ಲಿ ಬಂಧನ ಆದೇಶದಲ್ಲಿನ ನ್ಯೂನತೆಗಳು, ತಾಂತ್ರಿಕ ಲೋಪದೋಷಗಳ ಕುರಿತು ಚರ್ಚಿಸಲಾಗಿದ್ದು, ಅದರಂತೆ, ಗೂಂಡಾ ಕಾಯ್ದೆಯಡಿ ಪುಸ್ತಾವನೆಗಳನ್ನು ಪರಿಗಣಿಸುವಾಗ ಕೆಳಕಂಡ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬಂಧನ ಆದೇಶವನ್ನು ಹೊರಡಿಸುವಂತೆ ಎಲ್ಲಾ ಬಂಧನ ಪ್ರಾಧಿಕಾರಿಗಳಿಗೆ ಈ ಮೂಲಕ ಸೂಚಿಸಲಾಗಿದೆ.
1) ಗೂಂಡಾಕಾಯ್ಕೆಯು ಮೊಟ್ಟಮೊದಲಿಗೆ ಒಂದು ನಿವಾರಕ ಪ್ರತಿಬಂಧಕವಾಗಿ ಉಪಯೋಗಿಸುವ ಕಾಯ್ದೆಯಾಗಿದ್ದು, ಇದನ್ನು ಉಪಯೋಗಿಸುವ ಮೊದಲು ಜಿಲ್ಲಾಧಿಕಾರಿಗಳು / ಪೊಲೀಸ್ ಆಯುಕ್ತರು ಒಬ್ಬ ನಾಗರಿಕನ ಸಂವಿಧಾತ್ಮಕ ಹಕ್ಕನ್ನು ಮೊಟಕುಗೊಳಿಸಲು ಹೊರಟಿರುವ ವಿಷಯವನ್ನು ಗಮನದಲ್ಲಿಡುವುದು ಅವಶ್ಯಕವಾಗಿದೆ. ಇದನ್ನು ಪರಿಗಣಿಸದೇ ಇದ್ದಲ್ಲಿ, ಒಂದು ಗಂಭೀರವಾದ ಸಂವಿಧಾನ ಅನುಚ್ಛೇದ 21ರ ಉಲ್ಲಂಘನೆಯಾಗುತ್ತದೆ ಮತ್ತು ಇಂತಹ ತಪ್ಪಿಗೆ ಜಿಲ್ಲಾಧಿಕಾರಿಗಳು / ಪೊಲೀಸ್ ಆಯುಕ್ತರುಗಳೇ ಸ್ವತಃ ಬಾಧ್ಯರಾಗಿರುತ್ತಾರೆ. ಆದುದರಿಂದ, ಈ ಕಾಯ್ದೆಯನ್ನು ಕೊನೆಯ ಅಸ್ತ್ರವಾಗಿ ಉಪಯೋಗಿಸುವುದು ಅವಶ್ಯಕವಾಗಿರುವುದರಿಂದ, ಈ ವಿಷಯವನ್ನು ಗಮನದಲ್ಲಿಡಬೇಕಾಗಿದ್ದು, ಈ ಕಾಯ್ದೆಯನ್ನು ಸಾಮಾನ್ಯವಾಗಿ ವೈಯಕ್ತಿಕ ಹಿತಾಸಕ್ತಿ / ಯಾರದೋ ವಿರುದ್ಧವಾಗಿ ಜಾರಿಗೊಳಿಸುವಂತಿಲ್ಲ.
2) ಗೂಂಡಾ ಕಾಯ್ದೆಯಡಿ ಬಂಧನ ಆಜ್ಞೆಯನ್ನು ಹೊರಡಿಸುವ ಪೂರ್ವದಲ್ಲಿ ಯಾವುದೇ ಮಾಹಿತಿ ಕೊರತೆ ಉಂಟಾದಲ್ಲಿ ಸರ್ಕಾರದ ಅಪರ ಕಾರ್ಯದರ್ಶಿ / ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಕಾನೂನು & ಸುವ್ಯವಸ್ಥೆ) ಇವರನ್ನು ಸಂಪರ್ಕಿಸಿ, ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವುದು, ಗೂಂಡಾ ಕಾಯ್ದೆಯ ಕಲಂ 3 ಉಪ ಕಲಂ (1) & (2) ರಡಿ ಜಿಲ್ಲಾಧಿಕಾರಿ/ ಪೊಲೀಸ್ ಆಯುಕ್ತರಿಗೆ ಬಂಧನ ಆದೇಶ ಹೊರಡಿಸಲು ವಿತ್ತಾಧಿಕಾರವನ್ನು 03 ತಿಂಗಳಿಗೆ ಮಾತ್ರ ಅವಕಾಶವಿದ್ದು ಈ ಅಧಿಕಾರ ಪ್ರತ್ಯಾಯೋಜನೆಯನ್ನು ಕಾಲಕಾಲಕ್ಕೆ ವಿಸ್ತರಿಸಲಾಗುತ್ತದೆ. ಆದ್ದರಿಂದ ಬಂಧನ ಆಜ್ಞೆಯನ್ನು ಹೊರಡಿಸುವಾಗ ಇತ್ತೀಚಿನ ಅಧಿಸೂಚನೆ ಸಂಖ್ಯೆ ಮತ್ತು ದಿನಾಂಕವನ್ನು ಪರಿಶೀಲಿಸಿ ನಮೂದಿಸಲು ಕ್ರಮವಹಿಸತಕ್ಕದ್ದು.
3) ಕರ್ನಾಟಕ ಕಳ್ಳ ಭಟ್ಟಿ ವ್ಯಾಪಾರಿಗಳ, ಮಾದಕ ವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ ಕೊಳಚೆ ಪ್ರದೇಶಗಳನ್ನು ಕಬಳಿಸುವವರ, ವಿಡಿಯೋ ಅಥವಾ ಆಡಿಯೋ ಪೈರೇಟ್ ಚಟುವಟಿಕೆಗಳ ತಡೆ ಅಧಿನಿಯಮ, 1985ರಡಿ ಬರುವ ಗಂಭೀರ ಮತ್ತು ವಿಶೇಷವಾದ ಅಪರಾಧ ಪ್ರಕರಣಗಳನ್ನು ಹಾಗೂ ಸಾರ್ವಜನಿಕ ಸುವ್ಯವಸ್ಥೆ(Public Order)ಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ಪರಿಗಣಿಸಬೇಕಾಗಿದ್ದು, ರೂಢಿಗತ ಅಪರಾಧಿ ಎಂಬ ಕಾರಣಕ್ಕೆ ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸುವಂತಿಲ್ಲ.
4) ಗೂಂಡಾ ಬಂಧಿಗಳು ನ್ಯಾಯಾಲಯದಿಂದ ಖುಲಾಸೆಗೊಂಡಿರುವ | ಬಿಡುಗಡೆ ಹೊಂದಿರುವ ಹಿಂದಿನ ಹಳೆಯ ಅಪರಾಧ ಪ್ರಕರಣಗಳನ್ನು ಪರಿಗಣಿಸಿ, ಗೂಂಡಾಕಾಯ್ದೆಗೆ ಒಳಪಡಿಸುತ್ತಿರುವುದು ಕಂಡುಬಂದಿರುತ್ತದೆ. ಇತ್ತೀಚಿನ 4 ರಿಂದ 5 ವರ್ಷಗಳು ನಿರಂತರವಾಗಿ ಪ್ರಸ್ತುತದವರೆಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವವರನ್ನು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರವೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದು, ಈ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ಮಂಡಿಸುವುದು ಹಾಗೂ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿರುವ ಬಗ್ಗೆ ಬಂಧನ ಆಜ್ಞೆಯನ್ನು ಹೊರಡಿಸಲು ಸಮರ್ಥಿಸುವ ಕಾರಣಗಳ ಭಾಗದಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.
5) ಗೂಂಡಾಬಂಧಿಗೆ ಬಂಧನ ಆಜ್ಞೆ ಮತ್ತು ಬಂಧನದ ಕಾರಣಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಒದಗಿಸಲಾಗುತ್ತಿದೆ. ಒಂದು ವೇಳೆ ಬಂಧಿಗೆ ಕನ್ನಡ ಮತ್ತು ಆಂಗ್ಲ ಭಾಷೆ ಓದಲು/ಬರೆಯಲು/ಅರ್ಥ ಮಾಡಿಕೊಳ್ಳಲು ಬಾರದಿದ್ದಲ್ಲಿ, ಕನ್ನಡ ಮತ್ತು ಆಂಗ್ಲ ಭಾಷೆಯ ಜೊತೆಗೆ ಬಂಧಿಯ ಮಾತೃ ಭಾಷೆಯಲ್ಲಿಯೂ ಸಹ ಒದಗಿಸಲು ಕ್ರಮಕೈಗೊಳ್ಳತಕ್ಕದ್ದು. ಬಂಧನ ಆದೇಶವನ್ನು ಹೊರಡಿಸುವ ಸಂದರ್ಭದಲ್ಲಿ ಬಂಧಿಯ ಶಾಲಾ ದಾಖಲಾತಿಗಳ ಮೂಲಕ ಆತನ ಮಾತೃ ಭಾಷೆ, ಗೊತ್ತಿರುವ ಭಾಷೆಗಳು ಮತ್ತು ವಿದ್ಯಾರ್ಹತೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಆತನು ಅನಕ್ಷರಸ್ಥನಾಗಿದ್ದರೆ ಬಂಧನ ಆದೇಶದ ಸಂಪೂರ್ಣ ಮಾಹಿತಿಯನ್ನು ಆತನ ಸಂಬಂಧಿಕರ ಸಮ್ಮುಖದಲ್ಲಿ ಓದಿ, ಅರ್ಥೈಸಿ ಜಾರಿ ಮಾಡುವುದು. ಸಾಧ್ಯವಿದ್ದಲ್ಲಿ ಈ ಸಂಪೂರ್ಣ ಪ್ರಕ್ರಿಯೆಯನ್ನು ದಾಖಲೆಗಾಗಿ ವಿಡಿಯೋಗ್ರಫಿ ಮಾಡಿ ಒದಗಿಸುವುದು.
6) ಬಂಧನ ಆದೇಶ ಮತ್ತು ಬಂಧನದ ಕಾರಣಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹೊರಡಿಸಲಾಗುತ್ತಿದ್ದು, ಆಂಗ್ಲ ಭಾಷೆಯ ಭಾಷಾಂತರದ ಪ್ರತಿಗಳಲ್ಲಿ ಅನೇಕ ನ್ಯೂನತೆಗಳು ಮತ್ತು ವ್ಯತ್ಯಾಸವಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಭಾಷಾಂತರ ಪ್ರತಿಗಳನ್ನು ಬಂಧನ ಆಜ್ಞೆ ಹೊರಡಿಸುವ ಪ್ರಾಧಿಕಾರಿಗಳು ಖುದ್ದು ಓದಿ ಖಚಿತಪಡಿಸಿಕೊಳ್ಳಬೇಕು.
7) ಗೂಂಡಾಬಂಧಿಗೆ ಗೂಂಡಾ ಪ್ರಸ್ತಾವನೆಯನ್ನು ಜಾರಿ ಮಾಡುವ ಸಂದರ್ಭದಲ್ಲಿ ಆತನಿಗೆ ಒದಗಿಸಿರುವ ದಾಖಲಾತಿಗಳು ಸ್ಪಷ್ಟವಾಗಿ ಓದುವಂತಿರಬೇಕು. ಅಸ್ಪಷ್ಟ ದಾಖಲಾತಿಗಳಿದ್ದಲ್ಲಿ ಬೆರಳಚ್ಚಿಸಿ ಒದಗಿಸುವುದು, ಗೂಂಡಾಬಂಧಿಯ ಪ್ರಸ್ತಾವನೆಯಲ್ಲಿ ನಮೂದಿಸುವ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೆ, ಜಾಮೀನು ಉಲ್ಲಂಘಿಸಿದ್ದರೆ, ಪ್ರಕರಣದಿಂದ ಬಿಡುಗಡೆ ಹೊಂದಿದ್ದರೆ ಈ ಕುರಿತಂತೆ ಎಲ್ಲಾ ದಾಖಲಾತಿಗಳನ್ನು ಸಂಪೂರ್ಣವಾಗಿ ಒದಗಿಸಿ, ದಾಖಲಾತಿಗಳ ಪುಟ ಸಂಖ್ಯೆಯೊಂದಿಗೆ ವಿವರವನ್ನು ಹಾಗೂ ಪ್ರಸ್ತಾವನೆಯನ್ನು ಕ್ರಮಬದ್ಧವಾಗಿ ಒದಗಿಸಿರುವ ಬಗ್ಗೆ ನಮೂದಿಸಿ ಗೂಂಡಾ ಬಂಧಿಯಿಂದ ದಿನಾಂಕದೊಂದಿಗೆ ಸಹಿ ಪಡೆದು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು.
8) ಗೂಂಡಾ ಪುಸ್ತಾವನೆಯೊಂದಿಗೆ ಒದಗಿಸುವ ಬಂಧನ ಕಾರಣಗಳಲ್ಲಿ ಸರ್ಕಾರಕ್ಕೆ / ಮಾನ್ಯ ಸಲಹಾ ಮಂಡಳಿಗೆ ಮನವಿಯನ್ನು ಸಲ್ಲಿಸಲು ಇರುವ ಹಕ್ಕಿನ ಬಗ್ಗೆ ಸ್ಪಷ್ಟವಾಗಿ ನಮೂದಿಸಬೇಕು ಮತ್ತು ಬಂಧನ ಆದೇಶವನ್ನು ಜಾರಿ ಮಾಡುವ ಸಮಯದಲ್ಲಿ ಗೂಂಡಾಬಂದಿಗೆ ತಿಳಿಸಬೇಕು ಹಾಗೂ ಆತನ/ ಆತನ ಪರವಾಗಿ ಸಲ್ಲಿಸುವ ಮನವಿಯನ್ನು ತಕ್ಷಣವೇ ಸರ್ಕಾರಕ್ಕೆ/ಸಲಹಾ ಮಂಡಳಿಗೆ ಕಳುಹಿಸುವ ಬಗ್ಗೆ ಸಕ್ಷಮ ಪ್ರಾಧಿಕಾರ ಮತ್ತು ಕಾರಾಗೃಹ ಮುಖ್ಯಸ್ಥರು ಕ್ರಮವಹಿಸುವುದು.
9) ಗೂಂಡಾ ಕಾಯ್ದೆಯಡಿ ಹೊರಡಿಸಿರುವ ಬಂಧನ ಆದೇಶಗಳ ಕುರಿತು ಮಾನ್ಯ ಉಚ್ಚ ನ್ಯಾಯಾಲಯದ ಸಲಹಾ ಮಂಡಳಿಯ ಮುಂದೆ ವಿಚಾರಣೆ ನಡೆಯುವ ಸಮಯದಲ್ಲಿ ನಿಯೋಜಿತ ಅಧಿಕಾರಿಗಳು ಪ್ರಕರಣವನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಕಂಡುಬಂದಿರುತ್ತದೆ. ಈ ಪುಕರಣ ಕುರಿತು ಸಂಪೂರ್ಣವಾಗಿ ಅರ್ಥೈಸಿಕೊಂಡು, ಸಮರ್ಥ ವಿಡಿಯೋ, ಚಿತ್ರಗಳ CDR ಗಳನ್ನು ಸಲಹಾ ಮಂಡಳಿಯ ಮುಂದೆ ಪ್ರದರ್ಶಿಸಲು ಕ್ರಮವಹಿಸುವುದು.
10) ಇತ್ತೀಚೆಗೆ ಸಲ್ಲಿಕೆಯಾಗುತ್ತಿರುವ ಕೆಲವು ಗೂಂಡಾ ಪ್ರಕರಣಗಳ ಪುಸ್ತಾವನೆಯಲ್ಲಿ ನಮೂದಿಸಿರುವ ಮೊಕದ್ದಮೆ / ಪ್ರಕರಣಗಳು ಗೂಂಡಾ ಕಾಯ್ದೆಯಡಿ ಪರಿಗಣಿಸಲು ಅರ್ಹವಿರುವುದಿಲ್ಲವೆಂದು ಸರ್ಕಾರದ ಹಂತದಲ್ಲಿ ಮತ್ತು ಮಾನ್ಯ ಉಚ್ಚ ನ್ಯಾಯಾಲಯದ ಸಲಹಾ ಮಂಡಳಿಯ ಸಭೆಯ ಸಂದರ್ಭದಲ್ಲಿ ತಿಳಿದು ಬಂದಿರುತ್ತದೆ. (ಉದಾ:- ಮಟ್ಕಾ ದಂಧೆ, ರಕ್ತಚಂದನ ಅಕ್ರಮ ಸಾಗಾಣಿಕೆ, ಸಾಮಾನ್ಯ ರೌಡಿಪಟ್ಟಿಯಲ್ಲಿನ ಆಸಾಮಿಗಳ ಬಗೆಗಿನ ಪಕರಣಗಳು) ಇದು ಸಂವಿಧಾನವು ನೀಡಿರುವ ವ್ಯಕ್ತಿ ಸ್ವಾತಂತ್ರದ ಮೂಲಭೂತ ಹಕ್ಕಿಗೆ ಸಂಬಂಧಿಸಿರುವುದರಿಂದ, ಸಾರ್ವಜನಿಕ ಸುವ್ಯವಸ್ಥೆ (Public Order) ಪಕರಣಗಳನ್ನು ಬಂಧನ ಪ್ರಾಧಿಕಾರಗಳು ಖುದ್ದಾಗಿ ಕೂಲಂಕಷವಾಗಿ ಪರಿಶೀಲಿಸಿ, ಪರಿಶೀಲನಾ ಅಂಶಗಳನ್ನು ನಮೂದಿಸಿ ಸೂಕ್ತ ಆದೇಶ ಹೊರಡಿಸತಕ್ಕದ್ದು. ಇತರೆ ಗಂಭೀರ ಪ್ರಕರಣಗಳ ಸಂಬಂಧ ನಿರ್ಧಿಷ್ಟಪಡಿಸಿದ COFEPOSA PIT NDPS ಕಾಯ್ದೆಗಳಡಿ ಬಂಧನದಲ್ಲಿರಿಸುವ ಬಗ್ಗೆ ಪ್ರತ್ಯೇಕವಾಗಿ ಪರಿಶೀಲಿಸಿ, ಪ್ರತ್ಯೇಕ ಸಲಹಾ ಮಂಡಳಿಯಲ್ಲಿ ಮಂಡಿಸಬೇಕಾಗಿರುವುದರಿಂದ, ಈ ಬಗ್ಗೆ ಕ್ರಮವಹಿಸತಕ್ಕದ್ದು.
11) ಗೂಂಡಾ ಪ್ರಸ್ತಾವನೆಗಳಿಗೆ ಸರ್ಕಾರವು ಬಂಧನ ಆದೇಶ ಹೊರಡಿಸಿದ 12 ದಿನಗಳೊಳಗಾಗಿ ಅನುಮೋದನೆಯನ್ನು ನೀಡಬೇಕಾಗಿರುತ್ತದೆ. ಅನೇಕ ಪ್ರಕರಣಗಳಲ್ಲಿ ಪುಸ್ತಾವನೆಗಳನ್ನು ಬಂಧನ ಆಜ್ಞೆ ಹೊರಡಿಸಿದ ನಂತರ ತಡವಾಗಿ ಸರ್ಕಾರಕ್ಕೆ ಸಲ್ಲಿಸುತ್ತಿರುವುದು ಕಂಡುಬಂದಿರುತ್ತದೆ. ಆದ್ದರಿಂದ, ಬಂಧನ ಆದೇಶ ದಿನಾಂಕದಿಂದ 03 ದಿನಗಳೊಳಗಾಗಿ ಠಾಣಾಧಿಕಾರಿಗಳ ಮೂಲಕವೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಖುದ್ದಾಗಿ ಸಲ್ಲಿಸುವುದರೊಂದಿಗೆ, ಪಕರಣದ ಸಂಪೂರ್ಣ ಜವಾಬ್ದಾರಿಯನ್ನು ಸಹ ನಿರ್ವಹಿಸುವುದು, ಗೂಂಡಾಬಂಧಿಯು ಮನವಿಯನ್ನು ಸಲ್ಲಿಸಿದ ಸಂದರ್ಭದಲ್ಲಿ ಸದರಿ ಮನವಿಯನ್ನು ಸರ್ಕಾರದ ಹಂತದಲ್ಲಿ ಪರಿಶೀಲಿಸಲು, ಅಗತ್ಯ ದಾಖಲಾತಿಗಳು ಮತ್ತು ಮಾಹಿತಿಯನ್ನು ಕಾಲವಿಳಂಬವಿಲ್ಲದಂತೆ ಅಂದೇ ಸರ್ಕಾರಕ್ಕೆ ಸಲ್ಲಿಸುವುದು.
12) ಇತ್ತೀಚಿನ ಗೂಂಡಾ ಕಾಯ್ದೆಯ ಬಹಳಷ್ಟು ಪ್ರಕರಣಗಳಲ್ಲಿ ಗೂಂಡಾಬಂಧಿಯು ಈಗಾಗಲೇ ಗುರುತರವಾದ ಅಪರಾಧ ಪ್ರಕರಣಗಳಲ್ಲಿ ವಿಚಾರಣಾ ಖೈದಿಯಾಗಿ ಕಾರಾಗೃಹ ಬಂಧನದಲ್ಲಿ (ಕೊಲೆ, ಕೊಲೆ ಯತ್ನ ಇತ್ಯಾದಿ) ಇರುವ ಸಂದರ್ಭದಲ್ಲಿಯೇ ಆತನನ್ನು ಗೂಂಡಾಕಾಯ್ದೆಗೆ ಪರಿಗಣಿಸುತ್ತಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಗೂಂಡಾ ಬಂಧಿಯು ಮತ್ತೊಂದು ಪ್ರಕರಣದಲ್ಲಿ ಈಗಾಗಲೇ ಕಾರಾಗೃಹದಲ್ಲಿರುವಾಗ ಗೂಂಡಾಕಾಯ್ದೆಯಡಿ ಬಂಧಿಸುವುದಕ್ಕೆ ಅವಕಾಶವಿರುವುದಿಲ್ಲ.
13) ಬಂಧಿಯು ಜಾಮೀನು ಪ್ರಕರಣಗಳನ್ನು ಪದೇ ಪದೇ ಉಲ್ಲಂಘಿಸಿ ಅಪರಾಧ ಪುಕರಣಗಳಲ್ಲಿ ಭಾಗಿಯಾಗುತ್ತಿರುವುದಾಗಿ ತಿಳಿಸುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಗೂಂಡಾ ಕಾಯ್ದೆಯಡಿ ಪರಿಗಣಿಸುವ ಬದಲು, ನ್ಯಾಯಾಲಯಕ್ಕೆ ಆತನ ಅಪರಾಧ ಪ್ರಕರಣಗಳನ್ನು ಮನವರಿಕೆ ಮಾಡಿ, ಜಾಮೀನನ್ನು ರದ್ದುಪಡಿಸುವಂತೆ ಮಾನ್ಯ ನ್ಯಾಯಾಲಯವನ್ನು ಕೋರಲು ಕ್ರಮವಹಿಸತಕ್ಕದ್ದು.
14) ಸಲಹಾ ಮಂಡಳಿ ವಿಚಾರಣೆಯ ಸಮಯದಲ್ಲಿ ಎಸ್.ಪಿ ಮತ್ತು ಡಿಸಿಪಿ ದರ್ಜೆಯ ಅಧಿಕಾರಿಗಳು ಮಾತ್ರ ಪ್ರತಿನಿಧಿಸುವುದು.
15) ಗೂಂಡಾಬಂಧಿಯು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸುವ ಹೇಬಿಯಸ್ ಕಾರ್ಪಸ್ ಸಂದರ್ಭದಲ್ಲಿ ವ್ಯಾಜ್ಯ ನಿರ್ವಹಣಾಧಿಕಾರಿ ಹಾಗೂ ಶಾಪಥಾಧಿಕಾರಿಗಳು ರವರು ಆಕ್ಷೇಪಣಾ ಹೇಳಿಕೆ, ದಾಖಲಾತಿಗಳನ್ನು ತ್ವರಿತವಾಗಿ ಸರ್ಕಾರಿ ವಕೀಲರಿಗೆ ಸಲ್ಲಿಸಿ, ಪ್ರಕರಣದ ಸಮಯದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದು ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುವುದು. ಆಕ್ಷೇಪಣಾ ಹೇಳಿಕೆಯನ್ನು ಸಿದ್ಧಪಡಿಸುವ / ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸುವ ಸಂದರ್ಭದಲ್ಲಿ ರಿಟ್ ಅರ್ಜಿಯಲ್ಲಿನ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರಿ ವಕೀಲರಿಗೆ ಕಾಲಮಿತಿಯೊಳಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವುದು.
16) ಮುಖ್ಯವಾಗಿ ಗೂಂಡಾಬಂಧಿಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸುತ್ತಿರುವ ಹೇಬಿಯಸ್ ಕಾರ್ಪಸ್ ಪ್ರಕರಣಗಳಲ್ಲಿ ಗೂಂಡಾಬಂಧಿಯ ಮನವಿಯ ಬಗ್ಗೆ ಪಸ್ತಾಪವಾಗುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಗೂಂಡಾಬಂಧಿಗಳ ಮನವಿಯನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುತ್ತಿದೆ. ತಕ್ಷಣವೇ ಗೂಂಡಾಬಂಧಿಗೆ ಹಿಂಬರಹವನ್ನು ಸಹ ನೀಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಗೂಂಡಾಬಂಧಿಗಳು ತನ್ನ ವಿರುದ್ಧದ ಬಂಧನ ಆದೇಶಗಳಲ್ಲಿನ ನ್ಯೂನತೆಗಳು, ತಾಂತ್ರಿಕ ಲೋಪದೋಷಗಳ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಈ ಬಗ್ಗೆ ವಿವರವಾದ ವರದಿಗಾಗಿ ಬಂಧನ ಪ್ರಾಧಿಕಾರಿಗಳಿಗೆ ಬಂಧಿಯ ಮನವಿಯನ್ನು ಕಳುಹಿಸಿ, ಅವರಿಂದ ಕಂಡಿಕೆವಾರು ಷರಾ/ದಾಖಲೆಗಳನ್ನು ಪಡೆದು ಗೂಂಡಾಬಂಧಿಗೆ ಹಿಂಬರಹವನ್ನು ನೀಡಲಾಗುತ್ತಿದೆ. ಇಂತಹ ಪ್ರಕರಣಗಳು ಸೇರಿದಂತೆ, ಗೂಂಡಾಬಂಧಿಗಳು ಪ್ರಸ್ತಾಪಿಸುವ ತಾಂತ್ರಿಕ ಲೋಪದೋಷಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಆಕ್ಷೇಪಣಾ ಹೇಳಿಕೆಯನ್ನು ಸಲ್ಲಿಸುವುದು.
17) ಗೂಂಡಾಬಂಧಿಯು ಕಾರಾಗ್ರಹಕ್ಕೆ ದಾಖಲಾದ ಬಗ್ಗೆ ಆತನ ಮನವಿ ಮತ್ತು ಸರ್ಕಾರದ ಆದೇಶಗಳನ್ನು ಬಂಧಿಗೆ ಜಾರಿ ಮಾಡಿದ ಬಗ್ಗೆ ಜೈಲು ಪ್ರಾಧಿಕಾರವು ಸಂಬಂಧಿಸಿದ ಗೂಂಡಾಬಂಧಿಗೆ ಮತ್ತು ಸರ್ಕಾರಕ್ಕೆ ಕೂಡಲೇ ಮಾಹಿತಿ/ವರದಿಯನ್ನು ಸಲ್ಲಿಸುವುದು ಹಾಗೂ ಗೂಂಡಾಬಂಧಿಯನ್ನು ಮಾನ್ಯ ಸಲಹಾ ಮಂಡಳಿಯ ಮುಂದೆ ವಿಡಿಯೋ ಕಾನ್ಸರೆನ್ಸ್ ಮೂಲಕ ಹಾಜರುಪಡಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು ಎಂದಿದೆ.
BREAKING : ಇಂಡಿಯಾ ಮೈತ್ರಿಕೂಟಕ್ಕೆ ಬಿಗ್ ಶಾಕ್ : ಪಂಜಾಬ್’ನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ‘AAP’ ಘೋಷಣೆ